×
Ad

ಪಾಕಿಸ್ತಾನ | ಇಮ್ರಾನ್ ಖಾನ್ ಸಹೋದರಿ ಉಝ್ಮಾ ಖಾನಮ್ ಗೆ ಅಡಿಯಾಲಾ ಜೈಲಿನಲ್ಲಿ ಭೇಟಿಗೆ ಅನುಮತಿ

ಆರೋಗ್ಯ ಸ್ಥಿತಿ ಕುರಿತ ಆತಂಕದ ಹಿನ್ನೆಲೆಯಲ್ಲಿ ಪಿಟಿಐ ಬೆಂಬಲಿಗರಿಂದ ಪ್ರತಿಭಟನೆ ತೀವ್ರ

Update: 2025-12-02 18:57 IST

 ಇಮ್ರಾನ್ ಖಾನ್ | Photo Credit : NDTV 

ಇಸ್ಲಾಮಾಬಾದ್: ಭ್ರಷ್ಟಾಚಾರದ ಪ್ರಕರಣದಲ್ಲಿ ಆಗಸ್ಟ್‌ 2023ರಿಂದ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವರ ಸಹೋದರಿ ಉಝ್ಮಾ ಖಾನಮ್ ಅವರಿಗೆ ಮಂಗಳವಾರ ಅಡಿಯಾಲಾ ಕೇಂದ್ರ ಕಾರಾಗೃಹ ಪ್ರವೇಶಕ್ಕೆ ಅಧಿಕಾರಿಗಳು ಅನುಮತಿ ನೀಡಿದರು.

ಬಂಧನದಲ್ಲಿರುವ ಇಮ್ರಾನ್ ಖಾನ್ ಅವರ ಆರೋಗ್ಯ, ವಾಸ್ತವಿಕ ಸ್ಥಳ ಮತ್ತು ಯೋಗಕ್ಷೇಮದ ಬಗ್ಗೆ ಗಾಢ ಅನುಮಾನಗಳು ವ್ಯಕ್ತವಾಗುತ್ತಿದ್ದು, ಕುಟುಂಬಕ್ಕೆ ಇದು ಮೊದಲ ‘ಭೇಟಿ ಅವಕಾಶ’ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಉಝ್ಮಾ ಖಾನಮ್, ಪಿಟಿಐ ಬೆಂಬಲಿಗರ ಗುಂಪೊಂದಿಗೆ ಜೈಲಿಗೆ ಆಗಮಿಸಿ ಇಮ್ರಾನ್ ಖಾನ್ ಅವರನ್ನು ಒಳಗೆ ಭೇಟಿಯಾದರು ಎಂದು DAWN ವರದಿ ಮಾಡಿದೆ. ‘‘ಅಂತಿಮವಾಗಿ ಭೇಟಿ ಅನುಮತಿ ದೊರೆತಿದೆ. ಹೊರಗೆ ಬಂದು ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ,’’ ಎಂದು ಅವರು ಪ್ರತಿಕ್ರಿಯೆ ನೀಡಿದರು.

ಇಸ್ಲಾಮಾಬಾದ್ ಹೈಕೋರ್ಟ್ ಹೊರಗೆ ಪಿಟಿಐ ಕಾರ್ಯಕರ್ತರು ಇಮ್ರಾನ್ ಖಾನ್ ಅವರ ನಿಜವಾದ ಜೈಲುಸ್ಥಳ ಮತ್ತು ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಪ್ರದೇಶದಲ್ಲಿ ಸೆಕ್ಷನ್‌ 144 ಜಾರಿಯಲ್ಲಿದ್ದರೂ, ಪ್ರತಿಭಟನೆ ತೀವ್ರವಾಗಿ ನಡೆಯುತ್ತಿದೆ.

‘‘ಯಾವುದೇ ಸ್ಥಳವಾಗಲಿ ಐಎಚ್‌ಸಿ ಆಗಿರಲಿ ಅಥವಾ ಅಡಿಯಾಲಾ ಜೈಲು ಆಗಿರಲಿ ಸೆಕ್ಷನ್ 144 ಉಲ್ಲಂಘನೆಗೆ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳಲಾಗುವುದು,’’ ಎಂದು ಸಚಿವ ತಲ್ಲಾಲ್ ಚೌಧರಿ ಎಚ್ಚರಿಕೆ ನೀಡಿದರು. ಪಿಟಿಐ ಬೆಂಬಲಿತ ಜನಪ್ರತಿನಿಧಿಗಳು ಕಾನೂನಿನ ಮಿತಿ ಪಾಲಿಸಬೇಕು ಎಂದು ಕೂಡ ಅವರು ಒತ್ತಾಯಿಸಿದರು.

ಇಮ್ರಾನ್ ಖಾನ್ ಅವರನ್ನು ಏಕಾಂತ ಬಂಧನದಲ್ಲಿ ಇಡಲಾಗಿದೆ ಎಂಬು­ದನ್ನು ಕುಟುಂಬ ಮತ್ತೆ ಮತ್ತೆ ಆರೋಪಿಸುತ್ತಿದ್ದು, ಅವರ ಆರೋಗ್ಯ ಹಾಗೂ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ನ್ಯಾಯಾಲಯದ ಆದೇಶವಿದ್ದರೂ ಕುಟುಂಬ ಸದಸ್ಯರಿಗೆ ಭೇಟಿಗೆ ಅವಕಾಶ ಸಿಗದೇ ಇರುವುದನ್ನು ಖಾನ್ ಕುಟುಂಬ ‘ನ್ಯಾಯಾಲಯಕ್ಕೆ ಅವಮಾನ’ ಎಂದು ಹೇಳಿತ್ತು.

ಇಮ್ರಾನ್ ಖಾನ್ ಅವರ ಪುತ್ರ ಖಾಸಿಮ್, ‘‘ತಂದೆ ಸುರಕ್ಷಿತವಾಗಿದ್ದಾರೆಯೇ? ಅವರ ಮೇಲೆ ಹಲ್ಲೆ ನಡೆದಿದೆಯೇ? ಜೀವಂತವಾಗಿದ್ದಾರೆಯೇ? ಎನ್ನುವುದೇ ತಿಳಿಯದಿರುವುದು ಒಂದು ವಿಧದ ಮಾನಸಿಕ ಹಿಂಸೆಯಾಗಿದೆ,’’ ಎಂದು ರಾಯಿಟರ್ಸ್‌ಗೆ ಹೇಳಿಕೆ ನೀಡಿದ್ದಾರೆ.

ಇನ್ನೊಂದೆಡೆ, ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್, ತಮ್ಮ ಸಹೋದರರನ್ನು ಭೇಟಿಸಲು ಅವಕಾಶ ಕಲ್ಪಿಸಬೇಕೆಂಬ ಐಎಚ್‌ಸಿ ಆದೇಶವನ್ನು ಜೈಲು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ, ಅಡಿಯಾಲಾ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಲಯ ನಿಂದನಾ ಅರ್ಜಿ ಸಲ್ಲಿಸಿರುವುದಾಗಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News