Pakistan | ಜೈಲಿನಲ್ಲಿ ಜೀವಂತವಾಗಿರುವ ಇಮ್ರಾನ್ ಖಾನ್ ಸಹೋದರಿಯೊಂದಿಗೆ 20 ನಿಮಿಷಗಳ ಭೇಟಿಯ ವೇಳೆ ಹೇಳಿದ್ದೇನು?
ಇಮ್ರಾನ್ ಖಾನ್ | Photo Credit : NDTV
ಇಸ್ಲಾಮಾಬಾದ್: "ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಿದ್ದು, ನನ್ನ ಬಂಧನ ಹಾಗೂ ಈಗಿನ ಪರಿಸ್ಥಿತಿಗೆ ಕಾರಣವಾಗಿರುವ, ಸಂಪೂರ್ಣ ಸೇನಾ ನಿಯಂತ್ರಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಅವರು ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಝರ್ದಾರಿ ಹಾಗೂ ತಮಗೆ(ಮುನೀರ್) ಜೀತಾವಧಿ ರಕ್ಷಣೆಯನ್ನು ಖಾತರಿಪಡಿಸಲು ದೇಶದ ಸಂವಿಧಾನವನ್ನು ಮರು ರಚಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ" ಎಂದು ಇಮ್ರಾನ್ ಖಾನ್‌ರ ಸಹೋದರಿ ಡಾ. ಉಝ್ಮಾ ಖಾನುಂ ಮಂಗಳವಾರ ತಿಳಿಸಿದ್ದಾರೆ.
ತಮ್ಮ ಸಹೋದರ ಇಮ್ರಾನ್ ಖಾನ್‌ರೊಂದಿಗೆ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಇಪ್ಪತ್ತು ನಿಮಿಷಗಳ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಉಝ್ಮಾ ಖಾನುಂ, "ದೇವರ ದಯೆಯಿಂದ ಆತ ಚೆನ್ನಾಗಿದ್ದಾನೆ. ಆದರೆ, ತನಗೆ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಅತ ವ್ಯಗ್ರನಾಗಿದ್ದಾನೆ. ಇಡೀ ದಿನ ಆತನನ್ನು ಆತನ ಕೋಣೆಯಲ್ಲಿ ಕೂಡಿ ಹಾಕಲಾಗಿರುತ್ತದೆ. ಕಡಿಮೆ ಅವಧಿಗೆ ಮಾತ್ರ ಹೊರಗೆ ಬರಲು ಅವಕಾಶ ನೀಡಲಾಗುತ್ತಿದೆ ಹಾಗೂ ಯಾರೊಂದಿಗೆ ಸಂಭಾಷಿಸಲು ಅವಕಾಶ ದೊರೆಯುತ್ತಿಲ್ಲ" ಎಂದು ಆರೋಪಿಸಿದ್ದಾರೆ.
ಭ್ರಷ್ಟಾಚಾರದ ಆರೋಪದಲ್ಲಿ ಶಿಕ್ಷೆಗೊಳಗಾಗಿ ಆಡಿಯಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಸೇನಾ ಮುಖ್ಯಸ್ಥ ಅಸೀಂ ಮುನೀರ್ ಸೂಚನೆಯ ಮೇರೆಗೆ ಹತ್ಯೆಗೈಯ್ಯಲಾಗಿದೆ ಎಂಬ ವದಂತಿಗಳು ಕಾಳ್ಗಿಚ್ಚಿನಂತೆ ಹರಡಿದ ಪರಿಣಾಮ, ಇಮ್ರಾನ್ ಖಾನ್ ಹಾಗೂ ಅವರ ಸಹೋದರಿ ಡಾ. ಉಝ್ಮಾ ಖಾನುಂ ನಡುವೆ ಈ ಭೇಟಿ ನಡೆದಿದೆ.