ಕದನ ವಿರಾಮದ ನಂತರ ಗಾಝಾದಲ್ಲಿ ಅಮೆರಿಕದ ಮಿಲಿಟರಿ ಪಾತ್ರವೇನು?
ಮೊದಲ ಬಾರಿಗೆ ಬಹಿರಂಗ
ಸಾಂದರ್ಭಿಕ ಚಿತ್ರ | Photo Credit : NDTV
ವಾಷಿಂಗ್ಟನ್: ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಅಧಿಕಾರಿಗಳು ಗಾಝಾದಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ತಮ್ಮ ಸೇನೆ ವಹಿಸುವ ಪಾತ್ರವನ್ನು ಬಹಿರಂಗಪಡಿಸಿದ್ದಾರೆ.
ಗಾಝಾದಲ್ಲಿ ಕದನ ವಿರಾಮ ಜಾರಿಯಾದ ನಂತರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು, ಮಾನವೀಯ ನೆರವು ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸುಗಮಗೊಳಿಸಲು ಅಮೆರಿಕ ಇಸ್ರೇಲ್‌ಗೆ ಸುಮಾರು 200 ಸೈನಿಕರ ಪಡೆ ಕಳುಹಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್ ಸೆಂಟ್ರಲ್ ಕಮಾಂಡ್ ಇಸ್ರೇಲ್‌ನಲ್ಲಿ “ನಾಗರಿಕ-ಮಿಲಿಟರಿ ಸಮನ್ವಯ ಕೇಂದ್ರ”ವನ್ನು ಸ್ಥಾಪಿಸಲಿದೆ. ಈ ಕೇಂದ್ರದ ಉದ್ದೇಶ ಯುದ್ಧದಿಂದ ಪೀಡಿತ ಪ್ರದೇಶಗಳಿಗೆ ನೆರವು ತಲುಪಿಸುವ ಕಾರ್ಯವನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ಕದನ ವಿರಾಮದ ಅನುಷ್ಠಾನವನ್ನು ನಿಗಾದಲ್ಲಿ ಇರಿಸುವುದಾಗಿದೆ ಎಂದು ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಅಮೆರಿಕದ ಅಧಿಕಾರಿಗಳು ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಅಮೆರಿಕದ ಪಡೆಗಳು ಇಸ್ರೇಲ್‌ನಲ್ಲಿಯೇ ಉಳಿಯುತ್ತವೆ. ಗಾಝಾದೊಳಗೆ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎನ್ನಲಾಗಿದೆ.
ಈ ಮಧ್ಯೆ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಅವರು, ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಭಾಗವಾಗಿ ಯುನೈಟೆಡ್ ಕಿಂಗ್ಡಮ್ ಮಧ್ಯಪ್ರಾಚ್ಯಕ್ಕೆ ಸೈನ್ಯವನ್ನು ಕಳುಹಿಸುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
► ಅರಬ್ ರಾಷ್ಟ್ರಗಳ ಸಹಭಾಗಿತ್ವ
ಅಮೆರಿಕದ ಪಡೆಗಳ ಜೊತೆಗೆ ಈಜಿಪ್ಟ್, ಖತರ್, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಕೆಲವು ಅರಬ್ ರಾಷ್ಟ್ರಗಳು ಸಹ ಗಾಝಾದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ತಮ್ಮ ಪಡೆಗಳನ್ನು ಕಳುಹಿಸುವ ನಿರೀಕ್ಷೆಯಿದೆ. ಆದರೆ ಈ ರಾಷ್ಟ್ರಗಳು ಫೆಲೆಸ್ತೀನ್ ಪ್ರದೇಶದಲ್ಲಿ ನಿಖರವಾಗಿ ಯಾವ ರೀತಿಯ ಪಾತ್ರ ವಹಿಸಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
► ಇಸ್ರೇಲ್ ಪಡೆಗಳ ಹಿಂತೆಗೆದುಕೊಳ್ಳುವಿಕೆ
ಇದೇವೇಳೆ, ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಝಾ ಪಟ್ಟಿಯಿಂದ ಒಪ್ಪಂದದ ನಿಯೋಜನಾ ಮಾರ್ಗಗಳ ಪ್ರಕಾರ ಹಿಂತೆಗೆದುಕೊಳ್ಳುವಿಕೆಯನ್ನು ಪೂರ್ಣಗೊಳಿಸಿವೆ. ಈ ಕ್ರಮವು ಕದನ ವಿರಾಮದ ಅಧಿಕೃತ ಆರಂಭವನ್ನು ಸೂಚಿಸಿದ್ದು, ಅಮೆರಿಕ ಮಧ್ಯಸ್ಥಿಕೆಯ ಅಡಿಯಲ್ಲಿ ಹಮಾಸ್ ಬಂಧನದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು 72 ಗಂಟೆಗಳ ಕೌಂಟ್‌ಡೌನ್ ಪ್ರಾರಂಭವಾಗಿದೆ.