×
Ad

ಫ್ರಾನ್ಸ್‌ನಲ್ಲಿ ನಿಲ್ಲದ ಹಿಂಸಾತ್ಮಕ ಪ್ರತಿಭಟನೆಗಳು ; 45,000 ಪೊಲೀಸರು, ಅರೆಸೇನಾ ಪಡೆಗಳ ನಿಯೋಜನೆ

ದೇಶದಲ್ಲಿ ಎಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಧಾನಿ ಎಲಿಜಬೆತ್‌ ಬೋರ್ನ್‌ ಹೇಳಿದ್ದಾರೆ. ಹಲವಾರು ಬಸ್‌ ಹಾಗೂ ಟ್ರಾಮ್‌ ಸೇವೆಗಳು ಸ್ಥಗಿತಗೊಂಡಿವೆ ಹಾಗೂ ಪಟಾಕಿ ಮತ್ತಿತರ ವಸ್ತುಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

Update: 2023-07-01 12:25 IST

ಫೋಟೋ: ಟ್ವಿಟ್ಟರ್ 

ಪ್ಯಾರಿಸ್:‌ ಫ್ರಾನ್ಸ್‌ನಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ 45,000 ಪೊಲೀಸರನ್ನು ನಿಯೋಜಿಸಿದೆ. ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳವಾರ ಪ್ಯಾರಿಸ್‌ ಉಪನಗರಿಯ ಟ್ರಾಫಿಕ್‌ ಸ್ಟಾಪ್‌ ಒಂದರ ಸಮೀಪ ಪೊಲೀಸರ ಗುಂಡೇಟಿಗೆ ಯುವಕನೊಬ್ಬ ಬಲಿಯಾದ ನಂತರ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ.

ಯುರೋಪಿಯನ್‌ ಯೂನಿಯನ್‌ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ದೇಶಕ್ಕೆ ಧಾವಿಸಿರುವ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರಾನ್‌, ಒಬ್ಬ ಹದಿಹರೆಯದ ಯುವಕನ ಸಾವಿನ ಘಟನೆಯನ್ನು ಕೈಗೆತ್ತಿಕೊಂಡು ಈ ರೀತಿಯ ಪ್ರತಿಭಟನೆ ಸರಿಯಲ್ಲ ಎಂದು ಹೇಳಿದ್ದಾರೆ.

ಹದಿನೇಳು ವರ್ಷದ ನಾಹೆಲ್‌ ಎಂಬಾತನ ಹತ್ಯೆ ಘಟನೆಯು ದೇಶದಲ್ಲಿ ಪೊಲೀಸರ ನಡವಳಿಕೆ ಹಾಗೂ ಪ್ರಮುಖವಾಗಿ ಪ್ರಾನ್ಸ್‌ನ ಕಡಿಮೆ ಆದಾಯದ ಜನರು ಹಾಗೂ ಬಹು ಜನಾಂಗದ ಜನರು ವಾಸಿಸುವ ಉಪನಗರಿಗಳಲ್ಲಿ ಜನರನ್ನು ಅವರ ಜನಾಂಗದ ಆಧಾರದಲ್ಲಿ ಗುರುತು ಮಾಡುವ ಕುರಿತ ವ್ಯಾಪಕ ಆಕ್ರೋಶ ಈ ಹಿಂಸಾತ್ಮಕ ಪ್ರತಿಭಟನೆಯ ರೂಪದಲ್ಲಿ ಹೊರಹೊಮ್ಮಿದೆ. ಯುವಕನ ಅಂತ್ಯಕ್ರಿಯೆ ಇಂದು ನೆರವೇರಲಿದೆ.

ಶುಕ್ರವಾರ ದೇಶದಲ್ಲಿ ನಿಯೋಜಿಸಲಾದ 45,000 ಭದ್ರತಾ ಸಿಬ್ಬಂದಿಯಲ್ಲಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳೂ ಇವೆ.

ಪ್ರತಿಭಟನೆಗಳಲ್ಲಿ 492 ಕಟ್ಟಡಗಳು, 2000 ವಾಹನಗಳು ಹಾನಿಗೊಂಡಿದ್ದರೆ ದೇಶಾದ್ಯಂತ 3,850 ಕಡೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ದೇಶದಲ್ಲಿ ಎಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಪ್ರಧಾನಿ ಎಲಿಜಬೆತ್‌ ಬೋರ್ನ್‌ ಹೇಳಿದ್ದಾರೆ. ಹಲವಾರು ಬಸ್‌ ಹಾಗೂ ಟ್ರಾಮ್‌ ಸೇವೆಗಳು ಸ್ಥಗಿತಗೊಂಡಿವೆ ಹಾಗೂ ಪಟಾಕಿ ಮತ್ತಿತರ ವಸ್ತುಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News