ʼಅತ್ಯಾಚಾರ,ಹಿಂಸೆ,ಭಯೋತ್ಪಾದನೆʼ: ಭಾರತಕ್ಕೆ ಒಂಟಿಯಾಗಿ ಪ್ರಯಾಣಿಸದಂತೆ ಮಹಿಳೆಯರಿಗೆ ಅಮೆರಿಕದ ಎಚ್ಚರಿಕೆ
PC : X \ @Sassafrass_84
ವಾಷಿಂಗ್ಟನ್ ಡಿಸಿ: ಅಮೆರಿಕದ ವಿದೇಶಾಂಗ ಸಚಿವಾಲಯವು ಭಾರತಕ್ಕಾಗಿ ತನ್ನ ಪ್ರಯಾಣ ಸೂಚಿಯನ್ನು ದಿಢೀರ್ ಪರಿಷ್ಕರಿಸಿದೆ. ಲೆವೆಲ್-2 ಪ್ರಯಾಣ ಎಚ್ಚರಿಕೆಯನ್ನು ಹೊರಡಿಸಿರುವ ಅದು ಹೆಚ್ಚಿನ ಜಾಗ್ರತೆಯನ್ನು ವಹಿಸುವಂತೆ ಪ್ರಯಾಣಿಕರನ್ನು ಆಗ್ರಹಿಸಿದೆ.
‘ಅಪರಾಧ ಮತ್ತು ಭಯೋತ್ಪಾದನೆ’ ಕಾರಣದಿಂದಾಗಿ ಜೂನ್ 16ರಂದು ಹೊರಡಿಸಿರುವ ಸಲಹಾಸೂಚಿಯಲ್ಲಿ ಅದು,ಕೆಲವು ಪ್ರದೇಶಗಳಲ್ಲಿ ಅಪಾಯವು ಹೆಚ್ಚಿದೆ ಎಂದು ಹೇಳಿದೆ.
ಅತ್ಯಾಚಾರವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲೊಂದಾಗಿದೆ. ಲೈಂಗಿಕ ದೌರ್ಜನ್ಯ ಸೇರಿದಂತೆ ಹಿಂಸಾತ್ಮಕ ಅಪರಾಧಗಳು ಪ್ರವಾಸಿ ತಾಣಗಳು ಮತ್ತು ಇತರ ಸ್ಥಳಗಳಲ್ಲಿ ನಡೆಯುತ್ತಿವೆ, ಭಯೋತ್ಪಾದಕರು ಎಚ್ಚರಿಕೆಯನ್ನು ನೀಡಿ ಅಥವಾ ಎಚ್ಚರಿಕೆಯನ್ನೇ ನೀಡದೆ ದಾಳಿ ಮಾಡಬಹುದು. ಅವರು ಪ್ರವಾಸಿ ತಾಣಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು/ಶಾಪಿಂಗ್ ಮಾಲ್‌ಗಳು,ಸರಕಾರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿಸಿರುವ ಸಲಹಾಸೂಚಿಯು, ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಪ್ರಜೆಗಳಿಗೆ ತುರ್ತು ಸೇವೆಗಳನ್ನು ಒದಗಿಸುವ ಅಮೆರಿಕದ ಸಾಮರ್ಥ್ಯವು ಸೀಮಿತವಾಗಿದೆ. ಈ ಪ್ರದೇಶಗಳು ಪೂರ್ವ ಮಹಾರಾಷ್ಟ್ರ ಮತ್ತು ಉತ್ತರ ತೆಲಂಗಾಣದಿಂದ ಪೂರ್ವ ಪಶ್ಚಿಮ ಬಂಗಾಳದವರೆಗೆ ಹರಡಿಕೊಂಡಿವೆ ಎಂದು ಹೇಳಿದೆ.
ಅಪಾಯಗಳ ಕಾರಣದಿಂದಾಗಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕ ಸರಕಾರದ ಉದ್ಯೋಗಿಗಳು ಈ ರಾಜ್ಯಗಳಿಗೆ ಪ್ರಯಾಣಿಸಲು ವಿಶೇಷ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದೆ.
ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವುದನ್ನು ನಿರ್ದಿಷ್ಟಪಡಿಸಿರುವ ಸಲಹಾಸೂಚಿಯು, ಭಾರತದಲ್ಲಿ ಉಪಗ್ರಹ ಫೋನ್ ಅಥವಾ ಜಿಪಿಎಸ್ ಸಾಧನವನ್ನು ಹೊಂದಿರುವುದು ಕಾನೂನು ಬಾಹಿರವಾಗಿದೆ ಮತ್ತು ಅದಕ್ಕಾಗಿ 20,000 ಡಾಲರ್ ದಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದು. ವಿಶೇಷವಾಗಿ,ನೀವು ಮಹಿಳೆಯಾಗಿದ್ದರೆ ಒಂಟಿಯಾಗಿ ಪ್ರಯಾಣಿಸಬೇಡಿ ಎಂದು ಎಚ್ಚರಿಕೆ ನೀಡಿದೆ.
ಜಮ್ಮುಕಾಶ್ಮೀರ,ಭಾರತ-ಪಾಕಿಸ್ತಾನ ಗಡಿ,ಮಧ್ಯ ಮತ್ತು ಪೂರ್ವ ಭಾರತದ ಭಾಗಗಳಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಲಾಗಿದ್ದು,ಸಲಹಾ ಸೂಚಿಯು ಕೆಲವು ರಾಜ್ಯಗಳನ್ನು ಪಟ್ಟಿ ಮಾಡಿ ಬದಲಾಗುತ್ತಿರುವ ಬೆದರಿಕೆಯ ಸ್ವರೂಪದಿಂದಾಗಿ ಅಮೆರಿಕ ಸರಕಾರದ ಉದ್ಯೋಗಿಗಳು ಪೂರ್ವಾನುಮತಿ ಪಡೆದುಕೊಳ್ಳದೆ ಈ ರಾಜ್ಯಗಳ ರಾಜಧಾನಿ ನಗರಗಳಾಚೆಗೆ ಪ್ರಯಾಣಿಸಬಾರದು ಎಂದು ತಿಳಿಸಿದೆ. ಬಿಹಾರ, ಜಾರ್ಖಂಡ್, ಛತ್ತೀಸ್‌ಗಡ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ಒಡಿಶಾ ಇಂತಹ ರಾಜ್ಯಗಳ ಪಟ್ಟಿಯಲ್ಲಿ ಸೇರಿವೆ.
ಭಾರತದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕ ಸರಕಾರದ ಉದ್ಯೋಗಿಗಳು ಈ ರಾಜ್ಯಗಳ ರಾಜಧಾನಿ ನಗರಗಳಿಗೆ ಮಾತ್ರ ಪ್ರಯಾಣಿಸುತ್ತಿದ್ದರೆ ಪೂರ್ವಾನುಮತಿಯನ್ನು ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಸಲಹಾಸೂಚಿಯು ತಿಳಿಸಿದೆ.
ಭಾರತದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕ ಸರಕಾರದ ಉದ್ಯೋಗಿಗಳು ಮಹಾರಾಷ್ಟ್ರದ ಪೂರ್ವ ಭಾಗ ಮತ್ತು ಮಧ್ಯಪ್ರದೇಶದ ಪೂರ್ವ ಭಾಗಕ್ಕೆ ಪ್ರಯಾಣಿಸಲು ಅನುಮತಿಯನ್ನು ಪಡೆದುಕೊಳ್ಳುವುದೂ ಅಗತ್ಯವಾಗಿದೆ. ವಲಸೆ ಸಂಬಂಧಿತ ಬಂಧನ ಮತ್ತು ದಂಡಗಳ ಅಪಾಯದಿಂದಾಗಿ ಅಮೆರಿಕದ ಪ್ರಜೆಗಳು ಭೂಮಾರ್ಗದ ಮೂಲಕ ಭಾರತ-ನೇಪಾಳ ಗಡಿಯನ್ನು ದಾಟದಂತೆಯೂ ಸಲಹಾಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಪರಿಷ್ಕೃತ ಪ್ರಯಾಣ ಸಲಹಾಸೂಚಿಯಲ್ಲಿ ಮಣಿಪುರ ಮತ್ತು ಈಶಾನ್ಯ ಭಾರತದ ಇತರ ರಾಜ್ಯಗಳನ್ನೂ ವಿಶೇಷವಾಗಿ ಉಲ್ಲೇಖಿಸಲಾಗಿದೆ.