ಭಾರತ-ಪಾಕ್ ಸಂಘರ್ಷ ಶಮನ: ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಪಾಕ್ ನಾಮನಿರ್ದೇಶನ!
PC: x.com/BRICSinfo
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ "ರಾಜತಾಂತ್ರಿಕ ಮಧ್ಯಪ್ರವೇಶ ಮಾಡಿ ಪರಿವರ್ತನಾಶೀಲ ನಾಯಕತ್ವ ಪ್ರದರ್ಶಿಸಿದ" ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಪಾಕಿಸ್ತಾನ ನಾಮನಿರ್ದೇಶನ ಮಾಡಿದೆ.
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಹಲವು ದಿನಗಳ ಕಾಲ ಗಡಿಯಾಚೆಗೆ ಶೆಲ್ ದಾಳಿ ನಿರಂತರವಾಗಿ ನಡೆಯುತ್ತಿತ್ತು. ಈ ಹಂತದಲ್ಲಿ ಎರಡೂ ದೇಶಗಳು ದಿಢೀರನೇ ಶಾಂತಿ ಒಪ್ಪಂದಕ್ಕೆ ಬಂದಿದ್ದವು.
ಪಾಕಿಸ್ತಾನ ಸರ್ಕಾರದ ಅಧಿಕೃತ ಎಕ್ಸ್ ಖಾತೆಯಿಂದ ಈ ಬಗ್ಗೆ ಪೋಸ್ಟ್ ಮಾಡಲಾಗಿದ್ದು, "ಪಾಕಿಸ್ತಾನ ಸರ್ಕಾರ 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಜೆ.ಟ್ರಂಪ್ ಅವರ ಹೆಸರನ್ನು ಶಿಫಾರಸ್ಸು ಮಾಡುತ್ತಿದೆ. ಭಾರತ-ಪಾಕ್ ಸಂಘರ್ಷದ ಸಂದರ್ಭದಲ್ಲಿ ಟ್ರಂಪ್ ವಹಿಸಿದ ಪ್ರಮುಖ ರಾಜತಾಂತ್ರಿಕ ಹಸ್ತಕ್ಷೇಪ ಮತ್ತು ಪರಿವರ್ತನಾಶೀಲ ನಾಯಕತ್ವ ಪ್ರದರ್ಶಿಸಿದ್ದನ್ನು ಗುರುತಿಸಿ ಪಾಕಿಸ್ತಾನ ಸರ್ಕಾರವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಜೆ.ಟ್ರಂಪ್ ಅವರ ಹೆಸರನ್ನು ಅಧಿಕೃತವಾಗಿ ಶಿಫಾರಸ್ಸು ಮಾಡುತ್ತಿದೆ" ಎಂದು ಸ್ಪಷ್ಟಪಡಿಸಿದೆ.
ಭಾರತ- ಪಾಕ್ ಸಂಘರ್ಷದ ಬಳಿಕ ಅಮೆರಿಕ ಭೇಟಿ ನೀಡಿದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ್ ಮುನೀರ್ ಅವರಿಗೆ ಟ್ರಂಪ್ ಶ್ವೇತಭವನದಲ್ಲಿ ವಿಶೇಷ ಔತಣಕೂಟ ಆಯೋಜಿಸಿದ ಮರುದಿನವೇ ಈ ಅಚ್ಚರಿಯ ಹೇಳಿಕೆ ಹೊರಬಿದ್ದಿದೆ.
ಟ್ರಂಪ್ ಮತ್ತು ಮುನೀರ್ ನಡುವೆ ಔತಣಕೂಟದ ಸಂದರ್ಭದಲ್ಲಿ ಯಾವ ನಿರ್ದಿಷ್ಟ ಮಾತುಕತೆಗಳು ನಡೆದಿವೆ ಎನ್ನುವುದನ್ನು ಬಹಿರಂಗಪಡಿಸಿಲ್ಲ ಎಂದು ಜಿಯೊನ್ಯೂಸ್ ವರದಿ ಮಾಡಿದೆ. ಎರಡು ದೇಶಗಳ ನಡುವೆ ನಡೆಯಬಹುದಾಗಿದ್ದ ಅಣ್ವಸ್ತ್ರ ಸಮರವನ್ನು ತಪ್ಪಿಸಿದ ಕೀರ್ತಿ ಟ್ರಂಪ್ ಅವರಿಗೆ ಸಲ್ಲುತ್ತದೆ. ಆದ್ದರಿಂದ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಫೀಲ್ಡ್ ಮಾರ್ಷಲ್ ಮುನೀರ್ ಕರೆ ನೀಡಿದ್ದರು.
ಇತ್ತೀಚೆಗೆ ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಮುನೀರ್ ಅವರಿಗೆ ಔತಣ ಕೂಟ ನೀಡಿದ್ದರು. ಇದನ್ನು ಪಾಕಿಸ್ತಾನವು ರಾಜ ತಾಂತ್ರಿಕವಾಗಿ ದೊಡ್ಡಮಟ್ಟಿನ ಯಶಸ್ಸು ಎಂದು ಬಣ್ಣಿಸಿದೆ.