ಶಾಂಘೈ ಸಹಕಾರ ಸಂಘಟನೆ ಜಂಟಿ ದಾಖಲೆಗೆ ಸಹಿ ಹಾಕಲು ಭಾರತ ನಿರಾಕರಣೆ
PC | ANI
ಬೀಜಿಂಗ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಉಲ್ಲೇಖವಿರದ ಮತ್ತು ಭಯೋತ್ಪಾದನೆ ಬಗ್ಗೆ ಭಾರತದ ನಿಲುವನ್ನು ಪ್ರತಿಬಿಂಬಿಸದ ಕಾರಣ ಶಾಂಘೈ ಸಹಕಾರ ಸಂಘಟನೆ(ಎಸ್‍ಸಿಒ) ಜಂಟಿ ದಾಖಲೆಗೆ ಸಹಿ ಹಾಕಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರಾಕರಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕರ ದಾಳಿಯ ಕುರಿತು ಉಲ್ಲೇಖಿಸದ ಹೇಳಿಕೆಯಲ್ಲಿ ಪಾಕಿಸ್ತಾನದ ಪ್ರಕ್ಷುಬ್ಧ ಪ್ರಾಂತ ಬಲೂಚಿಸ್ತಾನವನ್ನು ಉಲ್ಲೇಖಿಸುವ ಮೂಲಕ ಭಾರತವು ಅಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ ಎಂದು ಪರೋಕ್ಷವಾಗಿ ಹೇಳಲಾಗಿದೆ. ಎಸ್‍ಸಿಒದ ಅಧ್ಯಕ್ಷತೆಯನ್ನು ಈಗ ಚೀನಾ ವಹಿಸಿರುವ ಕಾರಣ ತನ್ನ ನಿಕಟ ಮಿತ್ರ ಪಾಕಿಸ್ತಾನದ ಕೋರಿಕೆಯ ಮೇರೆಗೆ ದಾಖಲೆಯನ್ನು ಸಿದ್ಧಪಡಿಸಿರುವಂತೆ ಕಾಣುತ್ತದೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ.
ಭಾರತವು ಜಂಟಿ ದಾಖಲೆಯ ಪದಗಳ ಬಗ್ಗೆ ಭಾರತ ತೃಪ್ತಿ ಹೊಂದಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಉಲ್ಲೇಖವಿಲ್ಲ, ಆದರೆ ಪಾಕಿಸ್ತಾನದಲ್ಲಿ ಆದ ಘಟನೆಯನ್ನು ಉಲ್ಲೇಖಿಸಲಾಗಿದೆ. ಆದ್ದರಿಂದ ಭಾರತ ಸಹಿ ಹಾಕಲು ನಿರಾಕರಿಸಿದೆ ಮತ್ತು ಜಂಟಿ ಪ್ರಕಟಣೆಯೂ ಇರುವುದಿಲ್ಲ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ.
ಚೀನಾದ ಕ್ವಿಂಗ್‍ಡಾವೊದಲ್ಲಿ ನಡೆಯುತ್ತಿರುವ ಎಸ್‍ಸಿಒ ರಕ್ಷಣಾ ಸಚಿವರ ಸಭೆಯಲ್ಲಿ ಸಿಂಗ್ ಪಾಲ್ಗೊಂಡಿದ್ದಾರೆ. ಎಸ್‍ಸಿಒ ಸದಸ್ಯ ದೇಶಗಳಾದ ರಶ್ಯ, ಚೀನಾ ಮತ್ತು ಪಾಕಿಸ್ತಾನದ ಸಚಿವರೂ ಪಾಲ್ಗೊಂಡಿದ್ದಾರೆ.