ನಿಜ್ಜರ್ ಉತ್ತರಾಧಿಕಾರಿ ಇಂದ್ರಜಿತ್ ಸಿಂಗ್ ಕೆನಡಾದಲ್ಲಿ ಬಂಧನ
PC: x.com/IndicSocietee
ಒಟ್ಟಾವ: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ ಕೆನಡಾದಲ್ಲಿ ಖಲಿಸ್ತಾನ ಜನಮತಗಣನೆ ಅಭಿಯಾನದ ನೇತೃತ್ವ ವಹಿಸಿದ್ದ ಇಂದ್ರಜೀತ್ ಸಿಂಗ್ ಗೋಶಲ್ ನನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಕೆನಡಾ ಸಂಯೋಜಕನೂ ಆಗಿದ್ದ ಈತ ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಜತೆಗೂ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೆನಡಾದ ಭದ್ರತಾ ಸಲಹೆಗಾರ ನಥಾಲಿ ಡ್ರೂಯಿನ್ ಕಳೆದ ವಾರ ನವದೆಹಲಿಯಲ್ಲಿ ಪರಸ್ಪರ ಚರ್ಚೆ ನಡೆಸಿದ ಬೆನ್ನಲ್ಲೇ ಇಂದ್ರಜೀತ್ ಸಿಂಗ್ ನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಕಳೆದ ವರ್ಷ ಗ್ರೇಟರ್ ಟೊರಾಂಟೊದ ದೇವಾಲಯದಲ್ಲಿ ನಡೆದಿದ್ದ ಹಿಂಸೆ ಪ್ರಕರಣದಲ್ಲಿ ಕೂಡಾ ಅರೋಪಿಯಾಗಿದ್ದ ಈತನನ್ನು ಬಂಧಿಸಿ ಕೆಲ ಕಾಲದ ಬಳಿಕ ಬಿಡುಗಡೆ ಮಾಡಲಾಗಿತ್ತು. ನಿಜ್ಜರ್ ಹತ್ಯೆ ಬಳಿಕ ಈತ ಸಂಘಟನೆಯ ಹೊಣೆ ಹೊತ್ತಿದ್ದ. ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರೋಡೊ ಆಪಾದಿಸಿದ್ದರು.
ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕಗಳಲ್ಲಿ ಮುಂಚೂಣಿಯಲ್ಲಿದ್ದ ಗೋಶಲ್, ಖಲಿಸ್ತಾನ ಜನಮತಗಣನೆಗೆ ಪ್ರತಿಪಾದಿಸಿದ್ದರು. ಪ್ರತ್ಯೇಕತಾವಾದದ ಕಾರ್ಯಸೂಚಿಗೆ ಸಹಿ ಮಾಡುವಂತೆ ಬಲವಂತಪಡಿಸಿದ ಹಿನ್ನೆಲೆಯಲ್ಲಿ ಖಲಿಸ್ತಾನ ಪರ ಹೋರಾಟಗಾರರು ಹಾಗೂ ಇತರ ಸಿಖ್ ಸಮುದಾಯದವರ ಮಧ್ಯೆ ಸಂಘರ್ಷಗಳು ನಡೆದಿದ್ದವು.