‘ಆಕ್ಷೇಪಾರ್ಹ ಹೇಳಿಕೆ’ಗಾಗಿ ಜರ್ಮನಿ ರಾಯಭಾರಿಗೆ ಇರಾನ್ ಸಮನ್ಸ್: ವರದಿ
PC : PTI
ಟೆಹರಾನ್: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಇರಾನ್ ಕುರಿತು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಅವರು “ಆಕ್ಷೇಪಾರ್ಹ ಹೇಳಿಕೆ” ನೀಡಿರುವುದನ್ನು ಇರಾನ್ ಖಂಡಿಸಿದೆ. ಈ ಕುರಿತು ಇರಾನ್ ನಲ್ಲಿರುವ ಜರ್ಮನಿಯ ರಾಯಭಾರಿಯನ್ನು ಸಮನ್ಸ್ ಮಾಡಲಾಗಿದೆ ಎಂದು ಇರಾನ್ ನ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ವಿರುದ್ಧ ಇಸ್ರೇಲ್‌ನ ಅಪ್ರಚೋದಿತ ದಾಳಿಗಳು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂಬ ಕಾನೂನು ವಿದ್ವಾಂಸರ ಬಲವಾದ ಒಮ್ಮತದ ಹೊರತಾಗಿಯೂ, ಇರಾನ್ ವಿರುದ್ಧ ದಾಳಿ ನಡೆಸುವ ನಿರ್ಧಾರಕ್ಕಾಗಿ ಇಸ್ರೇಲಿ ಸೈನ್ಯ ಮತ್ತು ನಾಯಕತ್ವದ “ಧೈರ್ಯ”ವನ್ನು ಅವರು ಶ್ಲಾಘಿಸಿದ್ದರು.
ಇರಾನ್ “ಬೇಷರತ್ತಾದ ಶರಣಾಗತಿ” ನೀಡಬೇಕು ಎಂಬ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಇರಾನ್, ಅಮೆರಿಕದ ಪರವಾಗಿ ಪ್ರತಿನಿಧಿಯಾಗಿ ಟೆಹ್ರಾನ್‌ನಲ್ಲಿ ಕಾರ್ಯನಿರ್ವಹಿಸುವ ಸ್ವಿಸ್ ರಾಯಭಾರಿಗೂ ಸಮನ್ಸ್ ನೀಡಿದೆ.
ಇರಾನ್ ನಲ್ಲಿಲ್ಲ ಅಮೆರಿಕದ ರಾಯಭಾರ ಕಚೇರಿ!
ಅಮೆರಿಕವು ಇರಾನ್ ನಲ್ಲಿ ರಾಯಭಾರಿ ಕಚೇರಿ ಹೊಂದಿಲ್ಲ. ಅಮೆರಿಕದ ರಾಯಭಾರಿ ಕಚೇರಿಯ ಎಲ್ಲ ಕೆಲಸಗಳನ್ನು ಸ್ವಿಟ್ಜರ್ಲ್ಯಾಂಡ್ ರಾಯಭಾರ ಕಚೇರಿ ನಿರ್ವಹಣೆ ಮಾಡುತ್ತಿದೆ. 1979 ರಲ್ಲಿ ಅಮೆರಿಕ ರಾಯಭಾರ ಕಚೇರಿಯ 66 ಸಿಬ್ಬಂದಿಯ ಅಪಹರಣ ಘಟನೆ ಬಳಿಕ ಅಮೆರಿಕದ ರಾಯಭಾರಿ ಕಚೇರಿಯನ್ನು ಇರಾನ್ ನಲ್ಲಿ ಮುಚ್ಚಲಾಗಿದೆ. ಸ್ವಿಜರ್ಲ್ಯಾಂಡ್ ನ ರಾಯಭಾರಿ ಕಚೇರಿಯ ಮೂಲಕ ಅಮೆರಿಕದ ವೀಸಾ ಸೇರಿದಂತೆ ಇತರ ಕಾರ್ಯಗಳು ನಿರ್ವಹಣೆಯಾಗುತ್ತಿವೆ.