ಒಮಾನ್‍ನೊಂದಿಗೆ ಚೌಕಟ್ಟಿನ ಒಪ್ಪಂದಕ್ಕೆ ಸಹಮತ : ಇರಾನ್
ಹಾರ್ಮುಝ್ ಜಲಸಂಧಿ ಮತ್ತೆ ತೆರೆಯಲು ಸಜ್ಜು ?
ಹಾರ್ಮುಝ್ ಜಲಸಂಧಿ | Photo Credit : PTI
ಟೆಹರಾನ್, ಆ.7: ಇರಾನ್ ಮತ್ತು ಒಮಾನ್ ಹಾರ್ಮುಝ್ ಜಲಸಂಧಿಯನ್ನು ತಾತ್ಕಾಲಿಕವಾಗಿ ಪುನರಾರಂಭಿಸಲು ಕಾರ್ಯತಂತ್ರದ ಚೌಕಟ್ಟನ್ನು ತಲುಪಿವೆ. ಈ ಯೋಜನೆಯು ಈ ಆಯಕಟ್ಟಿನ ಜಲಮಾರ್ಗಕ್ಕೆ ಪ್ರವೇಶ ಮತ್ತು ನಿರ್ಗಮನದ ನಿಯಂತ್ರಣವನ್ನು ಹಂಚಿಕೊಳ್ಳುತ್ತದೆ ಎಂದು ಇರಾನ್‍ನ ಮಾಧ್ಯಮಗಳು ವರದಿ ಮಾಡಿವೆ.
ಉದ್ದೇಶಿತ ವ್ಯವಸ್ಥೆಯಡಿಯಲ್ಲಿ, ಇರಾನ್ ಹಾರ್ಮುಝ್ ಜಲಸಂಧಿಗೆ ನೌಕೆಗಳ ಪ್ರವೇಶವನ್ನು ನಿಯಂತ್ರಿಸಿದರೆ, ಒಮಾನ್ ಜಲಮಾರ್ಗದಿಂದ ಹೊರಹೋಗುವ ನೌಕೆಗಳ ಉಸ್ತುವಾರಿ ವಹಿಸಲಿದೆ. ಈ ಜಲಸಂಧಿಯು ಜಗತ್ತಿನ ಶೇ. 20ರಷ್ಟು ತೈಲ ಮತ್ತು ಅನಿಲ ಸರಬರಾಜನ್ನು ಸಾಗಿಸುತ್ತದೆ.
ಜಲಸಂಧಿಯ ಮೂಲಕ ಹಾದುಹೋಗುವ ನೌಕೆಗಳ ಮೇಲೆ ಆರಂಭದಲ್ಲಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ನೌಕೆಗಳಿಗೆ ಮುಕ್ತ ಸಂಚಾರವನ್ನು ಖಾತರಿಪಡಿಸಿದರೆ ಮಾತ್ರ ಜಲಮಾರ್ಗವನ್ನು ಪುನರಾರಂಭಿಸುವ ಒಪ್ಪಂದವನ್ನು ಸ್ವೀಕರಿಸುವುದಾಗಿ ಅಮೆರಿಕ ಹೇಳಿದೆ. ನೌಕೆಗಳು ಪೂರ್ವ ಅನುಮತಿ ಪಡೆಯುವ ಅಗತ್ಯತೆ ಸೇರಿದಂತೆ ಸಂಚಾರಕ್ಕೆ ಯಾವುದೇ `ಅಡೆತಡೆಗಳು' ಇಲ್ಲದಿರುವುದನ್ನು ಯಾವುದೇ ಒಪ್ಪಂದವು ಖಚಿತಪಡಿಸಿಕೊಳ್ಳಬೇಕು ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಒಪ್ಪಂದದ ಅಧಿಕೃತ ಘೋಷಣೆಯಲ್ಲಿ ಅಮೆರಿಕ ಮತ್ತು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಡಲ ಸಂಸ್ಥೆ (ಐಎಂಒ) ಭಾಗವಹಿಸುವ ನಿರೀಕ್ಷೆಯಿದೆ. ಆದರೆ, ಈ ಘೋಷಣೆಯ ಸಮಯವನ್ನು ನಿರ್ಧರಿಸಲಾಗಿಲ್ಲ. ಉದ್ದೇಶಿತ ವ್ಯವಸ್ಥೆಗೆ ಗಲ್ಫ್ ಸಹಕಾರ ಮಂಡಳಿ(ಜಿಸಿಸಿ)ಯ ಸದಸ್ಯರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ `ಎಂಎಸ್ ನೌ' ಸುದ್ದಿಸಂಸ್ಥೆ ವರದಿ ಮಾಡಿದೆ.