ಐತಿಹಾಸಿಕ `ಮಕ್ಕಾ ಜಂಟಿ ರಕ್ಷಣಾ ಒಪ್ಪಂದ'ಕ್ಕೆ ಸೌದಿ ಅರೇಬಿಯಾ, ತುರ್ಕಿಯೆ, ಪಾಕಿಸ್ತಾನ ಸಹಿ

Update: 2026-08-07 20:55 IST

Photo Credit : aljazeera.com

ರಿಯಾದ್, ಅ.7: ಸೌದಿ ಅರೇಬಿಯಾ, ತುರ್ಕಿಯೆ ಮತ್ತು ಪಾಕಿಸ್ತಾನ ದೇಶಗಳು ಶುಕ್ರವಾರ `ಮಕ್ಕಾ ಜಂಟಿ ರಕ್ಷಣಾ ಒಪ್ಪಂದ'ಕ್ಕೆ ಸಹಿ ಹಾಕಿದ್ದು, ಮೂರೂ ದೇಶಗಳ ನಡುವೆ ರಕ್ಷಣಾ ಸಹಕಾರವನ್ನು ವಿಸ್ತರಿಸಲು ಮತ್ತು ಸಾಮುದಾಯಿಕ/ಸಾಮೂಹಿಕ ಭದ್ರತೆಯನ್ನು ಬಲಪಡಿಸಲು ಬದ್ಧವಾಗಿವೆ.

ಸೌದಿ ಅರೇಬಿಯಾದ ಯುವರಾಜ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಲ್-ಸಫಾ ಅರಮನೆಯಲ್ಲಿ ಆಯೋಜಿಸಿದ್ದ `ಜಂಟಿ ರಕ್ಷಣೆಗಾಗಿ ಮಕ್ಕಾ ಅಲ್-ಮುಕರ್ರಮ್ ಶೃಂಗಸಭೆ'ಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ತುರ್ಕಿಯೆ ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ಡೋಗನ್ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಜಂಟಿ ಹೇಳಿಕೆಯ ಪ್ರಕಾರ, ಈ ಒಪ್ಪಂದವು ಯಾವುದೇ ಆಕ್ರಮಣಕಾರಿ ಕೃತ್ಯದ ವಿರುದ್ಧ ಒಟ್ಟಿಗೆ ನಿಂತು ತಡೆಯುವ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಮೂರು ದೇಶಗಳಲ್ಲಿ ಯಾವುದಾದರೂ ಒಂದರ ಮೇಲೆ ಸಶಸ್ತ್ರ ದಾಳಿ ನಡೆದರೆ, ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುವುದು ಎಂದು ಒಪ್ಪಂದದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಒಪ್ಪಂದವು ರಕ್ಷಣಾ ಸಹಕಾರವನ್ನು ಹೆಚ್ಚಿಸುವುದು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸುವುದು ಹಾಗೂ ಸಾಮಾನ್ಯ ರಣತಂತ್ರದ ಹಿತಾಸಕ್ತಿಗಳನ್ನು ಮುನ್ನಡೆಸುವ ಮೂರು ದೇಶಗಳ ಜಂಟಿ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೂವರೂ ನಾಯಕರು ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಸಂಬಂಧಗಳನ್ನು ಪರಾಮರ್ಶಿಸಿದರು ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಚರ್ಚಿಸಿದರು. ಈ ಒಪ್ಪಂದವು ದೇಶಗಳ ದೀರ್ಘಕಾಲದ ರಕ್ಷಣಾ ಸಹಕಾರ ಮತ್ತು `ಸಹೋದರತ್ವ ಹಾಗೂ ಇಸ್ಲಾಮಿಕ್ ಒಗ್ಗಟ್ಟಿನ ಶಾಶ್ವತ ಬಂಧಗಳ' ಮೇಲೆ ಆಧಾರಿತವಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ, ಈ ಮೂರು ದೇಶಗಳು ಜಂಟಿ ಮಿಲಿಟರಿ ಅಭ್ಯಾಸಗಳು, ರಕ್ಷಣಾ ತರಬೇತಿ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ರಕ್ಷಣಾ-ಔದ್ಯಮಿಕ ಸಹಭಾಗಿತ್ವದ ಮೂಲಕ ತಮ್ಮ ಸಹಕಾರವನ್ನು ವಿಸ್ತರಿಸಿವೆ. ಸೌದಿ ಅರೇಬಿಯಾವು ತುರ್ಕಿಯೆ ಮತ್ತು ಪಾಕಿಸ್ತಾನ ಎರಡಕ್ಕೂ ಪ್ರಮುಖ ಆರ್ಥಿಕ ಪಾಲುದಾರನಾಗಿ ಉಳಿದಿದೆ. ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ ಈ ಶೃಂಗಸಭೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News