ಗಾಝಾ ಶಾಂತಿ ಯೋಜನೆಯನ್ನು ಹಳಿ ತಪ್ಪಿಸಲು ಇಸ್ರೇಲ್ ಪ್ರಯತ್ನ: ಆರೋಪ

Update: 2026-08-07 21:54 IST

Photo Credit : PTI 

ದೋಹ, ಆ.7: ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಗಾಝಾ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸುವ ಪ್ರಯತ್ನಗಳನ್ನು ಇಸ್ರೇಲ್ ಬುಡಮೇಲು ಮಾಡುತ್ತಿದೆ ಎಂದು ಎಂಟು ದೇಶಗಳು ಆರೋಪಿಸಿವೆ.

ಖತರ್, ಜೋರ್ಡಾನ್, ಯುಎಇ, ಇಂಡೋನೇಷ್ಯಾ, ಪಾಕಿಸ್ತಾನ, ತುರ್ಕಿಯೆ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ನ ವಿದೇಶಾಂಗ ಸಚಿವರ ಜಂಟಿ ಹೇಳಿಕೆಯಲ್ಲಿ, ಆರೋಗ್ಯ ಸೌಲಭ್ಯಗಳು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ಮತ್ತು ನಾಗರಿಕರ ಪ್ರಾಣಹಾನಿ ಸೇರಿದಂತೆ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಮುಂದುವರಿಸಿರುವ ಉಲ್ಲಂಘನೆಗಳನ್ನು ತೀವ್ರವಾಗಿ ಖಂಡಿಸಲಾಗಿದೆ. ಈ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರಿಯುವುದು ರಾಜಕೀಯ ಪ್ರಕ್ರಿಯೆಯನ್ನು ಹಳಿ ತಪ್ಪಿಸುವ ಮತ್ತು ಮಾನವೀಯ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುವ ಅಪಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿವೆ.

ಸೇನಾ ಕಾರ್ಯಾಚರಣೆಯನ್ನು ಮುಂದುವರಿಸುವುದು ಅಂತರರಾಷ್ಟ್ರೀಯ ಕಾನೂನು ಮತ್ತು ಗಾಝಾ ಸಂಘರ್ಷವನ್ನು ಕೊನೆಗೊಳಿಸುವ ಸಮಗ್ರ ಯೋಜನೆಯ ಅಡಿಯಲ್ಲಿ ಇಸ್ರೇಲ್‍ನ ಹೊಣೆಗಾರಿಕೆಗಳ ಉಲ್ಲಂಘನೆಯಾಗಿದ್ದು ಯೋಜನೆಯ ಎರಡನೇ ಹಂತವನ್ನು ಜಾರಿಗೆ ತರಲು ಉದ್ದೇಶಿಸಿರುವ ಅಂತರ್‍ರಾಷ್ಟ್ರೀಯ ಮತ್ತು ಪ್ರಾದೇಶಿಕ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿವೆ ಮತ್ತು ರಾಜಕೀಯ ಪ್ರಕ್ರಿಯೆಯನ್ನು ಹಳಿ ತಪ್ಪಿಸುವ, ಸಂಘರ್ಷದ ಹಂತವನ್ನು ಮರಳಿ ಹೆಚ್ಚಿಸುವ ಮತ್ತು ಗಾಝಾ ಪಟ್ಟಿಯಲ್ಲಿ ಮಾನವೀಯ ದುರಂತವನ್ನು ಇನ್ನಷ್ಟು ತೀವ್ರಗೊಳಿಸುವ ಬೆದರಿಕೆಯನ್ನು ಒಡ್ಡುತ್ತದೆ ಎಂದು ಹೇಳಿಕೆ ತಿಳಿಸಿದೆ.

ಇಸ್ರೇಲ್ ಅಂತರ್‍ರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಬಾಧ್ಯತೆಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಗಂಭೀರ ಉಲ್ಲಂಘನೆಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ಅಂತರರಾಷ್ಟ್ರೀಯ ಸಮುದಾಯ, ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ `ಪ್ರಾಯೋಗಿಕ ಮತ್ತು ಪರಿಣಾಮಕಾರಿ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News