×
Ad

ಇಸ್ರೇಲ್ ಜೊತೆ ತೀವ್ರಗೊಂಡ ಸಂಘರ್ಷ : ಹಾರ್ಮುಝ್ ಜಲಸಂಧಿ ಮುಚ್ಚಲು ಇರಾನ್ ಚಿಂತನೆ?

Update: 2025-06-15 15:42 IST

Photo |  AP/Jon Gambrell

ಟೆಹರಾನ್ : ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಮಧ್ಯೆ ಇರಾನ್ ಹಾರ್ಮುಝ್ ಜಲಸಂಧಿಯನ್ನು ಮುಚ್ಚುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಇರಾನ್ ಸುದ್ದಿ ಸಂಸ್ಥೆ ಐಆರ್‌ಐಎನ್ಎನ್ ವರದಿ ಮಾಡಿದೆ.

ಇರಾನ್ ಪಾರ್ಲಿಮೆಂಟ್‌ ಸದಸ್ಯ ಇಸ್ಮಾಯಿಲ್ ಕೊಸಾರಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಐಆರ್‌ಐಎನ್ಎನ್ ಈ ಮಾಹಿತಿಯನ್ನು ನೀಡಿದೆ. ಹಾರ್ಮುಝ್‌ ಜಲಸಂಧಿಯನ್ನು ಮುಚ್ಚುವ ಈ ನಡೆಯು ಜಾಗತಿಕವಾಗಿ ತೈಲ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣವಾಗಬಹುದು, ಯುದ್ಧವು ಮತ್ತಷ್ಟು ಉಲ್ಬಣಗೊಳ್ಳುವ ಅಪಾಯವನ್ನು ಹೆಚ್ಚಿಸಬಹುದು.

ಹಾರ್ಮುಝ್‌ ಜಲಸಂಧಿ ಜಾಗತಿಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಹಾರ್ಮುಝ್‌ ಜಲಸಂಧಿಯು ಪರ್ಷಿಯನ್ ಗಲ್ಫ್‌ಗೆ ಇರುವ ಏಕೈಕ ಸಮುದ್ರ ಮಾರ್ಗವಾಗಿದೆ. ಈ ಜಲಸಂಧಿಯು ಒಂದು ಕಡೆ ಇರಾನ್ ದೇಶವನ್ನು ಮತ್ತು ಇನ್ನೊಂದು ಕಡೆ ಒಮಾನ್ ಹಾಗೂ ಯುಎಇ ದೇಶಗಳನ್ನು ಬೇರ್ಪಡಿಸುತ್ತದೆ. ಇದರ ಜೊತೆಗೆ, ಈ ಜಲಸಂಧಿಯು ಪರ್ಷಿಯನ್ ಗಲ್ಫ್ ಅನ್ನು ಒಮನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ.

ಅಮೆರಿಕದ ಎನರ್ಜಿ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಬಳಸಲಾಗುವ ತೈಲದ ಸುಮಾರು 20 ಶೇಕಡಾದಷ್ಟು ಭಾಗವು ಈ ಹಾರ್ಮುಝ್‌ ಜಲಸಂಧಿಯ ಮೂಲಕವೇ ಸಾಗಣೆಯಾಗುತ್ತದೆ. ಇದೇ ಕಾರಣಕ್ಕೆ ಅಮೆರಿಕದ ಎನರ್ಜಿ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್, ಹಾರ್ಮುಝ್‌ ಜಲಸಂಧಿಯನ್ನು "ವಿಶ್ವದ ಅತ್ಯಂತ ಪ್ರಮುಖವಾದ ತೈಲ ಸಾಗಣೆ ಮಾರ್ಗ" ಎಂದು ವಿವರಿಸಿದೆ.

ಹಾರ್ಮುಝ್ ಜಲಸಂಧಿ ಅತ್ಯಂತ ಕಿರಿದಾದ ಸ್ಥಳದಲ್ಲಿ 33 ಕಿಲೋಮೀಟರ್(21 ಮೈಲುಗಳು) ಅಗಲವನ್ನು ಹೊಂದಿದೆ. ಈ ಜಲಮಾರ್ಗದಲ್ಲಿ ಹಡಗುಗಳು ಸಂಚರಿಸುವ ದಾರಿಗಳು ಕಿರಿದಾಗಿವೆ. ಇದರಿಂದಾಗಿ ಈ ಮಾರ್ಗವು ದಾಳಿಗಳಿಗೆ ಮತ್ತು ಮುಚ್ಚುವ ಬೆದರಿಕೆಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ.

1980ರಿಂದ 1988ರವರೆಗೆ ನಡೆದ ಇರಾನ್ ಮತ್ತು ಇರಾಕ್ ದೇಶಗಳ ನಡುವಿನ ಯುದ್ಧದ ಸಮಯದಲ್ಲಿ, ಎರಡೂ ದೇಶಗಳು ಗಲ್ಫ್ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದವು. ಈ ವಿದ್ಯಮಾನವನ್ನು ಟ್ಯಾಂಕರ್ ಯುದ್ಧ ಎಂದು ಕರೆಯಲಾಗಿತ್ತು. ಆದರೆ ಹಾರ್ಮುಝ್ ಜಲಸಂಧಿಯನ್ನು ಆ ಸಮಯದಲ್ಲಿ ಸಂಪೂರ್ಣವಾಗಿ ಮುಚ್ಚಿರಲಿಲ್ಲ.

2019ರಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ವೇಳೆ ಯುಎಇಯ ಫುಜೈರಾ ಕರಾವಳಿಯ ಸಮೀಪವಿರುವ ಈ ಹಾರ್ಮುಝ್ ಜಲಸಂಧಿಯ ಬಳಿ ನಾಲ್ಕು ಹಡಗುಗಳ ಮೇಲೆ ದಾಳಿ ನಡೆದಿತ್ತು. ಅಮೆರಿಕವು ಈ ಘಟನೆಗೆ ಇರಾನ್ ದೇಶವೇ ಕಾರಣ ಎಂದು ಆರೋಪಿಸಿತ್ತು, ಆದರೆ ಇರಾನ್ ಆ ಆರೋಪಗಳನ್ನು ನಿರಾಕರಿಸಿತ್ತು.

ಹಿಂದಿನಿಂದಲೂ ಸಂಘರ್ಷದ ಸಂದರ್ಭಗಳಲ್ಲಿ ಒತ್ತಡ ಹೇರಲು ಹಡಗುಗಳ ಸಂಚಾರ ಮಾರ್ಗಗಳ ಮೇಲೆ ದಾಳಿ ಮಾಡುವುದು ಒಂದು ಸಾಮಾನ್ಯ ತಂತ್ರವಾಗಿದೆ. ಗಾಝಾದಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಯೆಮೆನ್ ದೇಶದ ಹೌತಿ ಬಂಡುಕೋರರು ಅರೇಬಿಯನ್ ಪೆನಿನ್ಸುಲಾದ ಇನ್ನೊಂದು ಬದಿಯಲ್ಲಿರುವ ಕೆಂಪು ಸಮುದ್ರಕ್ಕೆ ಪ್ರವೇಶಿಸುವ ಮಾರ್ಗವಾದ ಬಾಬ್ ಎಲ್-ಮಂಡೆಬ್ ಜಲಸಂಧಿಯ ಸುತ್ತಮುತ್ತಲಿನ ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದಾರೆ.

ಹೌತಿಗಳ ಈ ಕಾರ್ಯಾಚರಣೆಯು ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರಿದ್ದರೂ, ಹಡಗುಗಳು ಆಫ್ರಿಕಾ ಖಂಡದ ಸುತ್ತಲೂ ದೀರ್ಘವಾದ ಮಾರ್ಗದಲ್ಲಿ ಪ್ರಯಾಣಿಸುವ ಮೂಲಕ ಕೆಂಪು ಸಮುದ್ರವನ್ನು ತಪ್ಪಿಸಬಹುದು. ಆದರೆ, ಪರ್ಷಿಯನ್ ಗಲ್ಫ್‌ನಿಂದ ಯಾವುದೇ ಸರಕುಗಳನ್ನು ಸಮುದ್ರದ ಮೂಲಕ ಸಾಗಿಸಬೇಕಾದರೆ ಹಾರ್ಮುಝ್ ಜಲಸಂಧಿಯ ಮೂಲಕವೇ ಹೋಗಬೇಕಾಗುತ್ತದೆ. ಬೇರೆ ಯಾವುದೇ ಮಾರ್ಗವಿಲ್ಲ.

ಗಲ್ಫ್ ದೇಶಗಳಿಂದ ಪೆಟ್ರೋಲ್ ಅನ್ನು ಆಮದು ಮಾಡಿಕೊಳ್ಳದ ರಾಷ್ಟ್ರಗಳು ಕೂಡ ಹಾರ್ಮುಝ್ ಜಲಸಂಧಿಯನ್ನು ಮುಚ್ಚಿದರೆ ತೊಂದರೆ ಅನುಭವಿಸಬೇಕಾಗುತ್ತದೆ. ಏಕೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಪೂರೈಕೆಯಲ್ಲಿ ದೊಡ್ಡ ಪ್ರಮಾಣದ ಕೊರತೆಯುಂಟಾಗಿ ಪ್ರತಿ ಬ್ಯಾರೆಲ್ಗೆ ತೈಲದ ಬೆಲೆ ಹೆಚ್ಚಾಗುತ್ತದೆ.

ಇರಾನಿನ ಸಂಸದರು ಈಗ ಬೆದರಿಕೆ ಹಾಕಿದ್ದರೂ, ಹಾರ್ಮುಝ್ ಜಲಸಂಧಿಯನ್ನು ಮುಚ್ಚಲು ಇರಾನ್‌ಗೆ ಸಾಮರ್ಥ್ಯವಿದೆಯೇ ಅಥವಾ ಆ ದೇಶಕ್ಕೆ ಮುಚ್ಚುವ ಮನಸ್ಸು ನಿಜವಾಗಿಯೂ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಇರಾನ್ ಈ ಪ್ರಮುಖ ಜಲಸಂಧಿಯನ್ನು ಮುಚ್ಚಲು ಮುಂದಾದರೆ, ಆ ಪ್ರದೇಶದಲ್ಲಿ ತನ್ನ ನೌಕಾ ಮಿಲಿಟರಿ ಸಂಪನ್ಮೂಲಗಳನ್ನು ಹೊಂದಿರುವ ಅಮೆರಿಕದಿಂದ ಪ್ರತೀಕಾರ ಎದುರಿಸುವ ಸಾಧ್ಯತೆ ಇದೆ.

ಇರಾನ್ ಮೇಲೆ ಇಸ್ರೇಲ್ ನಡೆಸಿರುವ ದಾಳೆಯಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ. ಹಾಗಾಗಿ ನಮ್ಮ ಮೇಲೆನಾದರೂ ಇರಾನ್ ದಾಳಿ ಮಾಡಿದರೆ ನಮ್ಮ ಮಿಲಿಟರಿ ಪೂರ್ಣ ಪ್ರಮಾಣದಲ್ಲಿ ಇರಾನ್ ಮೇಲೇರಗಲಿದೆ ಎಂದು ಈಗಗಾಲೇ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈವರೆಗೆ ಅಮೆರಿಕದ ಮೇಲೆ ಇರಾನ್ ನೇರ ದಾಳಿ ಮಾಡಿಲ್ಲ. ಅಮೆರಿಕಾ ಕೂಡ ಇಸ್ರೇಲ್‌ಗೆ ಪೂರ್ಣ ಸಹಕಾರ ನೀಡಿದ್ದರೂ ಇರಾನ್ ಮೇಲೆ ನೇರವಾಗಿ ದಾಳಿ ಮಾಡಿಲ್ಲ. ಆದರೆ ಹಾರ್ಮುಝ್ ಜಲಸಂಧಿ ಬಂದ್ ಮಾಡಿದರೆ ಅದರಿಂದಾಗುವ ಆರ್ಥಿಕ ನಷ್ಟ ಅಮೆರಿಕವನ್ನು ಕೆರಳಿಸುವ ಸಾಧ್ಯತೆ ಇದೆ. 

ಹಾರ್ಮುಝ್ ಜಲಸಂಧಿ ಬಗ್ಗೆ ಇರಾನ್ ತಕ್ಷಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರಬಹುದು. ಆದರೆ ಕೊಸಾರಿ ಅವರ ಈ ಹೇಳಿಕೆಯು, ಸಂಘರ್ಷದ ನಡುವೆ ಇರಾನ್ ಬಳಸಬಹುದಾದ ಒಂದು ಅಸ್ತ್ರವೆಂದರೆ ಹಡಗು ಮಾರ್ಗಗಳ ಮೇಲೆ ದಾಳಿ ಮಾಡುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

2024ರ ಎಪ್ರಿಲ್‌ನಲ್ಲಿ ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್‌ನ ಕಾನ್ಸುಲೇಟ್ ಮೇಲೆ ಇಸ್ರೇಲ್ ದಾಳಿ ನಡೆಸಿದ ನಂತರ, ಆ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದ ಸಂದರ್ಭದಲ್ಲಿ ಇರಾನಿನ ಸಶಸ್ತ್ರ ಪಡೆಗಳು ಹಾರ್ಮುಝ್ ಜಲಸಂಧಿಯ ಸಮೀಪದಲ್ಲಿ ಒಂದು ಕಂಟೇನರ್ ಹಡಗನ್ನು ವಶಪಡಿಸಿಕೊಂಡಿತ್ತು. ಇದಾದ ನಂತರ ಇರಾನ್ ಇಸ್ರೇಲ್ ಮೇಲೆ ಸೀಮಿತ ಪ್ರಮಾಣದ ದಾಳಿ ನಡೆಸಿದೆ ಮತ್ತು ಇಸ್ರೇಲ್ ಕೂಡ ಇರಾನ್ ಮೇಲೆ ಪ್ರತಿದಾಳಿ ಮಾಡಿತ್ತು.

ಹಾರ್ಮುಝ್ ಜಲಸಂಧಿ ಜಾಗತಿಕ ತೈಲ ವ್ಯಾಪಾರಕ್ಕೆ ಅತ್ಯಂತ ಮಹತ್ವದ್ದಾಗಿದೆ. ಆ ಜಲಸಂಧಿಯನ್ನು ಮುಚ್ಚಿದರೆ ಜಾಗತಿಕವಾಗಿ ತೀವ್ರ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಪರಿಣಾಮಗಳು ಉಂಟಾಗಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News