ಕದನ ವಿರಾಮಕ್ಕೆ ಮನವಿ ಮಾಡಿಲ್ಲ; ಅಮೆರಿಕದ ಮೇಲೆ ಭೂ ಆಕ್ರಮಣಕ್ಕೂ ಸಿದ್ಧ: ಇರಾನ್
ಅಬ್ಬಾಸ್ ಅರಗ್ಚಿ PC: x.com/ferozwala
ಟೆಹರಾನ್: ಅಮೆರಿಕದ ಮೇಲೆ ಸಂಭಾವ್ಯ ಭೂ ಆಕ್ರಮಣಕ್ಕೂ ಸಿದ್ಧ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಘೋಷಿಸಿದ್ದು, ಇಸ್ರೇಲ್ ಹಾಗೂ ಅಮೆರಿಕ ಜತೆಗಿನ ಯುದ್ಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎನ್‌ಬಿಸಿಗೆ ವಿಡಿಯೊ ಸಂದರ್ಶನ ನೀಡಿದ ಅವರು, ಅಮೆರಿಕ ಭೂದಾಳಿ ನಡೆಸಿದರೆ ಪ್ರತಿದಾಳಿ ಕಾರ್ಯಾಚರಣೆಗೆ ಸಿದ್ಧ ಎಂದರು. ಇರಾನ್ ನ ಸೇನಾ ಮೂಲಸೌಕರ್ಯಗಳನ್ನು ಗುರಿ ಮಾಡಿ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸುತ್ತಿರುವ ನಡುವೆಯೇ ಸಚಿವರ ಹೇಳಿಕೆ ಮಹತ್ವ ಪಡೆದಿದೆ. ಅಮೆರಿಕದ ಸಂಭಾವ್ಯ ಭೂ ದಾಳಿ ಎದುರಿಸಲು ಇರಾನ್ ಸರ್ವಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಭೀಕರ ದಾಳಿಯ ಬಳಿಕವೂ ಇರಾನ್ ಎಂದೂ ಕದನ ವಿರಾಮಕ್ಕೆ ಮನವಿ ಮಾಡಿಲ್ಲ ಎಂದು ಹೇಳಿದ ಅವರು, "ನಾವು ಕದನ ವಿರಾಮಕ್ಕೆ ಕೊನೆಕ್ಷಣದಲ್ಲಿ ಕೂಡ ಮನವಿಮಾಡಿಲ್ಲ. ಕಳೆದ ಬಾರಿ ಇಸ್ರೇಲ್ ಕದನ ವಿರಾಮಕ್ಕೆ ಮನವಿ ಮಾಡಿತ್ತು. 12 ದಿಗಳ ಆಕ್ರಮಣದ ಬಳಿಕ ಬೇಷರತ್ ಕದನ ವಿರಾಮಕ್ಕೆ ಮನವಿ ಮಾಡಿತ್ತು" ಎಂದು ಕಳೆದ ಜೂನ್ ನಲ್ಲಿ ಇರಾನ್ ನ ಅಣುಸ್ಥಾವರಗಳನ್ನು ಗುರಿ ಮಾಡಿ ಇಸ್ರೇಲ್-ಅಮೆರಿಕ ನಡೆಸಿದ ದಾಳಿಯನ್ನು ಉಲ್ಲೇಖಿಸಿ ವಿವರ ನೀಡಿದರು.
ಇತ್ತೀಚಿನ ದಾಳಿಯಿಂದಾಗಿ ಅಮೆರಿಕ ಜತೆಗಿನ ಯಾವುದೇ ಸಂಧಾನ ಮಾತುಕತೆ ಸಾಧ್ಯತೆಗಳು ಮುರಿದುಬಿದ್ದಿವೆ ಎಂದು ಸ್ಪಷ್ಟಪಡಿಸಿದರು. ದಾಳಿಯ ಕೆಲವೇ ದಿನಗಳ ಮುನ್ನ ಇರಾನ್ ವಿದೇಶಾಂಗ ಸಚಿವರು ಜಿನೀವಾದಲ್ಲಿ ಟ್ರಂಪ್ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಜತೆಗೆ ರಾಜತಾಂತ್ರಿಕ ಮಾತುಕತೆ ನಡೆಸಿದ್ದರು.