ಇರಾನ್‌ನಲ್ಲಿ ಪ್ರಾಬಲ್ಯ ಮರುಸ್ಥಾಪನೆಗೆ ಅಮೆರಿಕ ಪ್ರಯತ್ನ: ಆಯತುಲ್ಲಾ ಅಲಿ ಖಾಮಿನೈ ಆರೋಪ
ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ (PTI)
ಟೆಹ್ರಾನ್, ಜ.17: ಇರಾನ್‌ನಲ್ಲಿ ಪ್ರಾಬಲ್ಯ ಮರುಸ್ಥಾಪಿಸಲು ಅಮೆರಿಕಾ ಪ್ರಯತ್ನಿಸುತ್ತಿದೆ. ದೇಶದಲ್ಲಿ ಪ್ರತಿಭಟನೆಯ ಸಂದರ್ಭದ ಸಾವು-ನೋವುಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣ ಎಂದು ಇರಾನಿನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಶನಿವಾರ ಆರೋಪಿಸಿದ್ದಾರೆ.
ಕೆಲ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ, ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಇರಾನ್‍ನಲ್ಲಿ ಶನಿವಾರ ಬಹುತೇಕ ಶಾಂತ ಪರಿಸ್ಥಿತಿ ನೆಲೆಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. `ಟ್ರಂಪ್ ಅವರು ಇರಾನ್ ರಾಷ್ಟ್ರದ ವಿರುದ್ದ ವ್ಯವಸ್ಥಿತ ಅಪಪ್ರಚಾರ, ಗಲಭೆಗೆ ಪ್ರಚೋದನೆಯ ಮೂಲಕ ಹಾನಿ ಎಸಗಿರುವ ಅಪರಾಧಿಯಾಗಿದ್ದಾರೆ. ಇರಾನಿನಲ್ಲಿ ನಡೆದ ಸಾವು-ನೋವುಗಳು, ನಾಶ-ನಷ್ಟಗಳಿಗೆ ಅಮೆರಿಕಾದ ಅಧ್ಯಕ್ಷರನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತೇವೆ. ಇದು ಅಮೆರಿಕಾದ ಪಿತೂರಿಯಾಗಿದೆ. ಇರಾನನ್ನು ನುಂಗಿಬಿಡುವುದು ಅಮೆರಿಕಾದ ಉದ್ದೇಶವಾಗಿದೆ. ಇರಾನನ್ನು ಮತ್ತೆ ಅಮೆರಿಕಾದ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ಪ್ರಾಬಲ್ಯದ ಅಡಿಗೆ ತರುವುದು ಅವರ ಗುರಿಯಾಗಿದೆ' ಎಂದು ಖಾಮಿನೈ ಹೇಳಿರುವುದಾಗಿ `ದಿ ಇರಾನ್ ಇಂಟರ್‌ನ್ಯಾಷನಲ್' ವರದಿ ಮಾಡಿದೆ.
ಅಧಿಕಾರಿಗಳು ದೇಶದ್ರೋಹಿಗಳ ಬೆನ್ನು ಮುರಿಯಬೇಕು. ರಾಷ್ಟ್ರವನ್ನು ಯುದ್ದದತ್ತ ಮುನ್ನಡೆಸಲು ನಾವು ಬಯಸುವುದಿಲ್ಲ. ಆದರೆ ನಾವು ದೇಶೀಯ ಕ್ರಿಮಿನಲ್‍ಗಳನ್ನು ಸುಮ್ಮನೆ ಬಿಡುವುದಿಲ್ಲ. ದೇಶೀಯ ಕ್ರಿಮಿನಲ್‍ಗಳಿಗಿಂತಲೂ ಕೆಟ್ಟದಾಗಿರುವ ಅಂತರಾಷ್ಟ್ರೀಯ ಕ್ರಿಮಿನಲ್‍ಗಳನ್ನು ಬಿಡುವ ಮಾತೇ ಇಲ್ಲ. ದೇವರ ದಯೆಯಿಂದ, ಇರಾನ್ ರಾಷ್ಟ್ರವು ದೇಶದ್ರೋಹದ ಬೆನ್ನನ್ನು ಮುರಿದಂತೆ ದೇಶದ್ರೋಹಿಗಳ ಬೆನ್ನನ್ನೂ ಮುರಿಯುತ್ತೇವೆ ' ಎಂದು ಖಾಮಿನೈ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.