ಇರಾನ್‌ನಲ್ಲಿ ಮುಂದುವರಿದ ಪ್ರತಿಭಟನೆ|ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ತುರ್ತು ಸಭೆ
ದಾಳಿ ಮಾಡಿದರೆ ತಕ್ಕ ಉತ್ತರ: ಅಮೆರಿಕಾಗೆ ಇರಾನ್ ಎಚ್ಚರ
Photo Credit : aljazeera.com
ವಿಶ್ವಸಂಸ್ಥೆ,ಜ.16: ಇರಾನಿನಲ್ಲಿ ಮುಂದುವರಿದಿರುವ ಹಿಂಸಾತ್ಮಕ ಪ್ರತಿಭಟನೆಯ ಬಗ್ಗೆ ಚರ್ಚಿಸಲು ಗುರುವಾರ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಅಮೆರಿಕಾ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ವರದಿಯಾಗಿದೆ.
ತುರ್ತು ಸಭೆಯನ್ನುದ್ದೇಶಿಸಿ ಮಾತನಾಡಿದ ಅಮೆರಿಕಾದ ರಾಯಭಾರಿ ಮೈಕ್ ವಾಲ್ಟ್ಸ್ `ಇರಾನ್‍ನಲ್ಲಿ ಹಿಂಸಾಚಾರ ಉಲ್ಬಣಿಸುವುದನ್ನು ಗಮನಿಸಿಯೂ ಅಮೆರಿಕಾ ಸುಮ್ಮನಿರುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇರಾನಿನಲ್ಲಿ ಇಂಟರ್‌ನೆಟ್ ಸ್ಥಗಿತದ ಕಾರಣ ಅಲ್ಲಿನ ಅಧಿಕಾರಿಗಳ ದಮನದ ನಿಜವಾದ ವ್ಯಾಪ್ತಿಯನ್ನು ಪರಿಶೀಲಿಸುವುದು ಕಷ್ಟವಾಗಿದೆ. ಒಂದು ವಿಷಯವನ್ನು ಈ ಸಭೆಗೆ ಸ್ಪಷ್ಟಪಡಿಸುತ್ತೇನೆ. ಅಧ್ಯಕ್ಷ ಟ್ರಂಪ್ ಕ್ರಿಯಾಶೀಲ ವ್ಯಕ್ತಿ. ಕೇವಲ ಮಾತುಗಳನ್ನು ಮಾತ್ರ ಆಡುವವರಲ್ಲ. ವಿಶ್ವಸಂಸ್ಥೆಯಲ್ಲಿ ನಾವು ನೋಡಿದಂತೆ ಅಂತ್ಯವಿಲ್ಲದ ಮಾತುಗಳಲ್ಲಿ ಅವರಿಗೆ ವಿಶ್ವಾಸವಿಲ್ಲ. ಇರಾನ್‌ನಲ್ಲಿ ಮುಂದುವರಿದಿರುವ ಹತ್ಯಾಕಾಂಡವನ್ನು ನಿಲ್ಲಿಸಲು ಎಲ್ಲಾ ಆಯ್ಕೆಗಳನ್ನೂ ಮುಕ್ತವಾಗಿರಿಸಿಕೊಂಡಿದ್ದೇವೆ. ಇದು ಇರಾನಿನ ಆಡಳಿತಕ್ಕೆ ಉತ್ತಮವಾಗಿ ತಿಳಿದಿದೆ' ಎಂದು ಹೇಳಿದರು.
ಅಮೆರಿಕಾ ಮೂಲದ `ಹ್ಯೂಮನ್ ರೈಟ್ಸ್ ಆ್ಯಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ'ಯ ಅಂಕಿಅಂಶದ ಪ್ರಕಾರ, ಪ್ರತಿಭಟನೆಯ ಸಂದರ್ಭ 2,435 ಪ್ರತಿಭಟನಾಕಾರರು ಮತ್ತು ಸರಕಾರಕ್ಕೆ ಸಂಬಂಧಿಸಿದ 153 ವ್ಯಕ್ತಿಗಳು ಮೃತಪಟ್ಟಿದ್ದಾರೆ. ನಾರ್ವೆ ಮೂಲದ `ಇರಾನ್ ಹ್ಯೂಮನ್ ರೈಟ್ಸ್(ಐಎಚ್‍ಆರ್)' ಪ್ರಕಾರ ಇರಾನಿನ ಭದ್ರತಾ ಪಡೆಗಳು ಕನಿಷ್ಠ 3,428 ಪ್ರತಿಭಟನಾಕಾರರನ್ನು ಹತ್ಯೆ ಮಾಡಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಇರಾನಿನ ಸಹಾಯಕ ವಿಶ್ವಸಂಸ್ಥೆ ರಾಯಭಾರಿ ಘೊಲಾಮ್‍ಹೊಸ್ಸೆನ್ ಡಾರ್ಜಿ `ಇರಾನ್ ಉಲ್ಬಣ ಅಥವಾ ಘರ್ಷಣೆಯನ್ನು ಬಯಸುವುದಿಲ್ಲ' ಎಂದರು. ಇರಾನಿನಲ್ಲಿನ ಅಶಾಂತಿಯನ್ನು ಹಿಂಸಾಚಾರಕ್ಕೆ ತಿರುಗಿಸುವಲ್ಲಿ ಅಮೆರಿಕಾದ ನೇರ ಪಾಲ್ಗೊಳ್ಳುವಿಕೆಯನ್ನು ಮರೆ ಮಾಚಲು ಅಮೆರಿಕಾದ ರಾಯಭಾರಿ ಮೈಕ್ ವಾಲ್ಟ್ಸ್ ಉದ್ದೇಶಪೂರ್ವಕ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದಾರೆ. ಆದರೆ ಯಾವುದೇ ಆಕ್ರಮಣಕಾರಿ ಕ್ರಿಯೆಯನ್ನು -ಪ್ರತ್ಯಕ್ಷ ಅಥವಾ ಪರೋಕ್ಷವಾಗಿ- ನಿರ್ಣಾಯಕ, ಪ್ರಮಾಣಾನುಗುಣ ಮತ್ತು ಕಾನೂನುಬದ್ಧ ಪ್ರತಿಕ್ರಿಯೆಯೊಂದಿಗೆ ಎದುರಿಸಲಾಗುತ್ತದೆ. ಇದು ಬೆದರಿಕೆಯಲ್ಲ, ಕಾನೂನು ವಾಸ್ತವದ ಹೇಳಿಕೆಯಾಗಿದೆ. ಎಲ್ಲಾ ಪರಿಣಾಮಗಳ ಜವಾಬ್ದಾರಿಯು ಅಂತಹ ಕಾನೂನುಬಾಹಿರ ಕೃತ್ಯಗಳನ್ನು ಪ್ರಾರಂಭಿಸುವವರ ಮೇಲೆ ಮಾತ್ರ ಇರುತ್ತದೆ' ಎಂದು ಇರಾನ್ ರಾಯಭಾರಿ ಭದ್ರತಾ ಮಂಡಳಿಯಲ್ಲಿ ಪ್ರತಿಪಾದಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ರಶ್ಯದ ವಿಶ್ವಸಂಸ್ಥೆ ರಾಯಭಾರಿ ವ್ಯಾಸಿಲಿ ನೆಬೆಂಝಿಯಾ `ಸಾರ್ವಭೌಮ ರಾಷ್ಟ್ರದ ಆಂತರಿಕ ವ್ಯವಹಾರಗಳಲ್ಲಿ ಸ್ಪಷ್ಟವಾದ ಆಕ್ರಮಣಶೀಲತೆ ಮತ್ತು ಹಸ್ತಕ್ಷೇಪವನ್ನು ಸಮರ್ಥಿಸುವ ಪ್ರಯತ್ನವಾಗಿ ಅಮೆರಿಕಾ ಭದ್ರತಾ ಮಂಡಳಿಯ ಸಭೆಯನ್ನು ಕರೆದಿದೆ. ತನಗೆ ಅನುಕೂಲಕರ ರೀತಿಯಲ್ಲಿ ಇರಾನಿನ ಸಮಸ್ಯೆಗಳನ್ನು ಪರಿಹರಿಸುವ ಬೆದರಿಕೆಯೊಡ್ಡುತ್ತಿದೆ' ಎಂದು ಆರೋಪಿಸಿದರು.
ಮೂರು ವಾರಗಳ ಹಿಂದೆ ಇರಾನಿನಲ್ಲಿ ಆರಂಭಗೊಂಡ `ಜನಪ್ರಿಯ ಪ್ರತಿಭಟನೆ' ಕ್ಷಿಪ್ರವಾಗಿ ರಾಷ್ಟ್ರವ್ಯಾಪಿ ದಂಗೆಯಾಗಿ ವಿಕಸನಗೊಂಡಿದ್ದು ಗಮನಾರ್ಹವಾದ ಜೀವಹಾನಿ ಸಂಭವಿಸಿದೆ. ಇರಾನಿನಲ್ಲಿ ಸಾಮೂಹಿಕ ಬಂಧನಗಳನ್ನು ಮಾನವ ಹಕ್ಕುಗಳ ವೀಕ್ಷಕರು ವರದಿ ಮಾಡಿದ್ದು 2026ರ ಜನವರಿ 15ರವರೆಗೆ 18,000ಕ್ಕೂ ಅಧಿಕ ಜನರನ್ನು ಬಂಧಿಸಿರುವ ಮಾಹಿತಿಯಿದೆ ' ಎಂದು ವಿಶ್ವಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿ ಮಾರ್ಥಾ ಪೊಬೀ ಹೇಳಿದರು.
ಬಂಧಿತರನ್ನು ಮಾನವೀಯವಾಗಿ ನಡೆಸಿಕೊಳ್ಳುವಂತೆ, ಪ್ರತಿಭಟನೆ ಸಂಬಂಧಿತ ಪ್ರಕರಣಗಳಲ್ಲಿ ಯಾವುದೇ ಮರಣದಂಡನೆಗಳನ್ನು ನಿಲ್ಲಿಸುವಂತೆ, ಎಲ್ಲಾ ಪ್ರಾಣಹಾಣ ತ್ವರಿತವಾಗಿ, ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ತನಿಖೆ ಮಾಡಬೇಕು' ಎಂದವರು ಆಗ್ರಹಿಸಿದ್ದಾರೆ.