ಮಚಾದೊ ಅವರಿಂದ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದನ್ನು ಸಮರ್ಥಿಸಿಕೊಂಡ ಟ್ರಂಪ್
PC | x.com/WhiteHouse
ವಾಷಿಂಗ್ಟನ್, ಜ.17: ವೆನೆಝುವೆಲಾದ ವಿರೋಧ ಪಕ್ಷದ ನಾಯಕಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
8 ಜಾಗತಿಕ ಯುದ್ದಗಳನ್ನು ಕೊನೆಗೊಳಿಸುವಲ್ಲಿ ನಿರ್ವಹಿಸಿರುವ ಪಾತ್ರವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು ಇದು ಪ್ರಾಮಾಣಿಕ ನಿರ್ಧಾರವಾಗಿದೆ. ಅವರು ಪ್ರಶಸ್ತಿಯನ್ನು ನನಗೆ ಒಪ್ಪಿಸುವುದಾಗಿ ಹೇಳಿದರು. ಇದು ಉತ್ತಮ ನಿರ್ಧಾರವೆಂದು ನಾನು ಭಾವಿಸಿದೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರ ಪ್ರಶ್ನೆಗೆ ಟ್ರಂಪ್ ಉತ್ತರಿಸಿದರು. `ನೀವು ಎಂಟು ಯುದ್ದಗಳನ್ನು ಕೊನೆಗೊಳಿಸಿದ್ದೀರಿ. ಆದ್ದರಿಂದ ನಿಮಗಿಂತ ಹೆಚ್ಚು ಯಾರೂ ಈ ಪ್ರಶಸ್ತಿಗೆ ಅರ್ಹರಲ್ಲ' ಎಂದು ಮಚಾದೊ ಹೇಳಿದ್ದರು. ಒಂದು ವರ್ಷದಲ್ಲಿ ನಾವು 8 ಯುದ್ದಗಳನ್ನು ತಪ್ಪಿಸಿದ್ದೇನೆ. ಭಾರತ-ಪಾಕಿಸ್ತಾನದ ಸಂಘರ್ಷವನ್ನು ಕೊನೆಗೊಳಿಸಿರುವುದಕ್ಕೆ ಪಾಕ್ ಪ್ರಧಾನಿ ಶಹಬಾಝ್ ಷರೀಫ್ ವೈಯಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದ್ದರು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಈ ಮಧ್ಯೆ, ಮಚಾದೊ ಅವರಿಂದ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿರುವುದನ್ನು ನಾರ್ವೆಯ ನಾಯಕರು, ನೊಬೆಲ್ ಪ್ರತಿಷ್ಠಾನದ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಪ್ರಶಸ್ತಿಯನ್ನು ಟ್ರಂಪ್ ಸ್ವೀಕರಿಸಿರುವುದು `ಇತರ ಜನರ ಸಾಧನೆಗಳ ಶ್ರೇಯವನ್ನು ತನ್ನದಾಗಿಸಿಕೊಳ್ಳುವ ಸ್ವಭಾವವನ್ನು ತೋರಿಸಿದೆ' ಎಂದು ನಾರ್ವೆಯ ಸಂಸದ ಟ್ರಿಗ್ವೆ ವೆಡುಮ್ ಟೀಕಿಸಿದ್ದಾರೆ.