×
Ad

ಟ್ರಂಪ್ ರನ್ನು ಸುಳ್ಳುಗಾರ ಎಂದು ಕರೆದ ಇರಾನಿನ ಪರಮೋಚ್ಚ ನಾಯಕ; ಇಸ್ರೇಲ್ ಗೆ ಮತ್ತೆ ಎಚ್ಚರಿಕೆ

Update: 2025-05-18 17:41 IST

Photo : x.com/Khamenei_fa

ಟೆಹರಾನ್: ಶಾಂತಿಯನ್ನು ಉತ್ತೇಜಿಸಲು ಅಮೆರಿಕದ ಶಕ್ತಿಯನ್ನು ಬಳಸುತ್ತಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿರುವ ಇರಾನಿನ ಪರಮೋಚ್ಚ ನಾಯಕ ಆಯಾತುಲ್ಲಾ ಅಲಿ ಖಾಮಿನೈ ಅವರು, ಈ ಹೇಳಿಕೆ ಟ್ರಂಪ್ ಮತ್ತು ಅಮೆರಿಕ ಎರಡಕ್ಕೂ ಅವಮಾನವಾಗಿದೆ ಎಂದು ಬಣ್ಣಿಸಿದ್ದಾರೆ.

ಶನಿವಾರ ಟೆಹರಾನ್ ನಲ್ಲಿ ಶಿಕ್ಷಕರೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಖಾಮಿನೈ ಈ ಹೇಳಿಕೆ ನೀಡಿರುವುದನ್ನು ಸರಕಾರಿ ಸುದ್ದಿಸಂಸ್ಥೆ ಐಆರ್ಎನ್ಎ ವರದಿ ಮಾಡಿದೆ.

ಇತ್ತೀಚಿನ ಪಶ್ಚಿಮ ಏಶ್ಯಾ ಪ್ರವಾಸದ ಸಂದರ್ಭದಲ್ಲಿ ಟ್ರಂಪ್ ಹೇಳಿಕೆಗಳನ್ನು ಉಲ್ಲೇಖಿಸಿದ ಖಾಮಿನೈ, ತಾನು ಶಾಂತಿಗಾಗಿ ಅಧಿಕಾರವನ್ನು ಬಳಸಲು ಬಯಸಿದ್ದೇನೆ ಎಂದು ಟ್ರಂಪ್ ಸುಳ್ಳು ಹೇಳಿದ್ದಾರೆ. ಅವರು ಮತ್ತು ಅಮೆರಿಕದ ಇತರ ಅಧಿಕಾರಿಗಳು ಗಾಝಾದಲ್ಲಿ ಹತ್ಯೆಗಳನ್ನು ಬೆಂಬಲಿಸಲು ಮತ್ತು ಸಾಧ್ಯವಾದಲ್ಲೆಲ್ಲ ಯುದ್ಧೋನ್ಮಾದವನ್ನು ಹರಡಲು ಅಧಿಕಾರವನ್ನು ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಇಸ್ರೇಲ್ ವಿರುದ್ಧ ತನ್ನ ದೀರ್ಘ ಕಾಲದ ದ್ವೇಷವನ್ನು ಪುನರುಚ್ಚರಿಸಿದ ಅವರು, ಅದು ‘ಝಿಯೊನಿಸ್ಟ್’ ಆಡಳಿತವಾಗಿದ್ದು, ಈ ಪ್ರದೇಶದಲ್ಲಿಯ ಅಪಾಯಕಾರಿ ಮತ್ತು ಮಾರಕ ಕ್ಯಾನ್ಸರ್ ಗಡ್ಡಯಾಗಿದೆ. ಅದನ್ನು ಬೇರುಸಹಿತ ಕಿತ್ತುಹಾಕಬೇಕು ಎಂದು ಹೇಳಿದರು.

ಪ್ರಾದೇಶಿಕ ದೇಶಗಳ ದೃಢಸಂಕಲ್ಪವನ್ನು ಉಲ್ಲೇಖಿಸಿ ಖಾಮಿನೈ, ಅಂತಿಮವಾಗಿ ಈ ಪ್ರದೇಶದಿಂದ ಹಿಂದೆ ಸರಿಯುವುದು ಅಮೆರಿಕಕ್ಕೆ ಅನಿವಾರ್ಯವಾಗಲಿದೆ ಎಂದು ಹೇಳಿದರು. ಖಾಮಿನೈ ಹೇಳಿಕೆಗಳು ಅವರ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಗೊಂಡಿದ್ದು,ಚೀನಾದ ಷಿನುವಾ ಸುದ್ದಿಸಂಸ್ಥೆ ಸೇರಿದಂತೆ ವಿವಿಧ ಸರಕಾರಿ ಸಂಬಂಧಿತ ಮಾಧ್ಯಮ ಸಂಸ್ಥೆಗಳು ಅದನ್ನು ಪ್ರಕಟಿಸಿವೆ.

ಟ್ರಂಪ್ ಈ ವಾರದ ಪೂರ್ವಾರ್ಧದಲ್ಲಿ ಸೌದಿ ಅರೆಬಿಯ,ಕತರ್ ಮತ್ತು ಯುಎಇಗೆ ಭೇಟಿ ನೀಡಿದ್ದರು. ರಿಯಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಇರಾನನ್ನು ಮಧ್ಯಪ್ರಾಚ್ಯದ ‘ಅತ್ಯಂತ ವಿನಾಶಕಾರಿ ಶಕ್ತಿ’ ಎಂದು ಟೀಕಿಸಿದ್ದರು ಮತ್ತು ಅದು ಅಣ್ವಸ್ತ್ರಗಳನ್ನು ಪಡೆಯುವುದನ್ನು ತಡೆಯುವುದಾಗಿ ಪ್ರತಿಜ್ಞೆ ಮಾಡಿದ್ದರು.

2015ರ ಇರಾನಿನ ಪರಮಾಣು ಒಪ್ಪಂದವಾದ ಜಂಟಿ ಸಮಗ್ರ ಕ್ರಿಯಾ ಯೋಜನೆಯ ನಿಬಂಧನೆಗಳಿಗೆ ತಾನು ಮರಳುವುದಿಲ್ಲ ಎಂದೂ ಟ್ರಪ್ ಸುಳಿವು ನೀಡಿದ್ದರು. ಅವರು 2018ರಲ್ಲಿ ಆ ಒಪ್ಪಂದದಿಂದ ಹಿಂದೆ ಸರಿದಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಒಪ್ಪಂದ ಪಾಲನೆಯಿಂದ ಹಿಂದಕ್ಕೆ ಸರಿಯಲು ಆರಂಭಿಸಿತ್ತು.

ಇರಾನ್ ಶಾಂತಿಯುತ ಪರಮಾಣು ಕಾರ್ಯಕ್ರಮದ ತನ್ನ ಹಕ್ಕನ್ನು ಬಿಟ್ಟುಕೊಡುವುದಿಲ್ಲ ಮತ್ತು ಇದೇ ವೇಳೆ ಅಮೆರಿಕದೊಂದಿಗೆ ಪ್ರಾಮಾಣಿಕ ಮಾತುಕತೆಗಳಿಗೆ ಅದು ಬದ್ಧವಾಗಿದೆ ಎಂದು ಇರಾನಿನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರ್ಘಚ್ಚಿ ಅವರು ಶನಿವಾರ ಪುನರುಚ್ಚರಿಸಿದ್ದರು.

ಒಮಾನ್ ನೇತೃತ್ವದಲ್ಲಿ ನಡೆದಿರುವ ಮಧ್ಯಸ್ಥಿಕೆ ಪ್ರಯತ್ನಗಳಲ್ಲಿ ಉಭಯ ದೇಶಗಳು ನಾಲ್ಕು ಸುತ್ತುಗಳ ಮಾತುಕತೆಗಳಲ್ಲಿ ತೊಡಗಿಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News