ಐರಿಷ್ ಸಾಹಿತಿ ಪೌಲ್ ಲಿಂಚ್ ಅವರ ʼಪ್ರಾಫೆಟ್ ಸಾಂಗ್ʼ ಕಾದಂಬರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ
ಪೌಲ್ ಲಿಂಚ್ (Image credit: X/@DDIndialive)
ಲಂಡನ್: ಐರಿಷ್ ಲೇಖಕ ಪೌಲ್ ಲಿಂಚ್ ಅವರು ತಮ್ಮ ಕಾದಂಬರಿ ʼಪ್ರಾಫೆಟ್ ಸಾಂಗ್ʼಗಾಗಿ ಪ್ರತಿಷ್ಠಿತ 2023 ಬೂಕರ್ ಪ್ರಶಸ್ತಿ ಗೆದ್ದಿದ್ದಾರೆ. ಕಾಲ್ಪನಿಕ ಐರಿಷ್ ಸರ್ಕಾರವೊಂದು ನಿರಂಕುಶ ಪ್ರಭುತ್ವದತ್ತ ವಾಲಿದಾಗ ಮಹಾವಿನಾಶದ ಅಂಚಿನಲ್ಲಿರುವ ಕುಟುಂಬ ಹಾಗೂ ದೇಶವೊಂದರ ಕಥೆಯನ್ನು ಈ ಕಾದಂಬರಿ ಹೊಂದಿದೆ.
ಪೌಲ್ ಅವರ ಐದನೇ ಕಾದಂಬರಿಯಾಗಿರುವ “ಪ್ರಾಫೆಟ್ ಸಾಂಗ್” ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿರುವ ಅಶಾಂತಿಯ ವಾತಾವರಣ ಹಾಗೂ ಸಿರಿಯಾದ ಸಮಸ್ಯೆಯಂತಹ ವಿಚಾರಗಳಲ್ಲಿ ಅವುಗಳು ತಾಳಿರುವ ಅಲಕ್ಷ್ಯದ ಧೋರಣೆಯ ಚಿತ್ರಣವನ್ನು ಈ ಕಾದಂಬರಿ ನೀಡುತ್ತದೆ.
ಬೂಕರ್ ಪ್ರಶಸ್ತಿಯನ್ನು ಬೂಕರ್‌ನ 2023 ತೀರ್ಪುಗಾರರ ಪೀಠದ ಅಧ್ಯಕ್ಷರಾದ ಎಸಿ ಎಡುಗ್ಯಾನ್ ರವಿವಾರ ಘೋಷಿಸಿದರು.
ವಿಜೇತ ಲೇಖಕ ಪೌಲ್ ಲಿಂಚ್ ಅವರು ಈ ಹಿಂಧೆ ಐರ್ಲ್ಯಾಂಡಿನ ಸಂಡೆ ಟ್ರಿಬ್ಯೂನ್ ಪತ್ರಿಕೆಯ ಮುಖ್ಯ ಸಿನಿಮಾ ವಿಮರ್ಶಕರಾಗಿದ್ದರು.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಐದನೇ ಐರಿಷ್ ಸಾಹಿತಿ ಇವರಾಗಿದ್ದಾರೆ. ಈ ಹಿಂದೆ ಐರ್ಲ್ಯಾಂಡಿನ ಐರಿಸ್ ಮುರ್ಡೊಚ್, ಜಾನ್ ಬನ್ವಿಲ್ಲೆ, ರಾಡ್ಡಿ ಡಾಯ್ಲ್ ಮತ್ತು ಆನ್ನೆ ಎನ್ರೈಟ್ ಈ ಪ್ರಶಸ್ತಿ ಗೆದ್ದಿದ್ದರು.
ʻಪ್ರಾಫೆಟ್ ಸಾಂಗ್ʼ ಕಾದಂಬರಿಯನ್ನು ಇಂಗ್ಲೆಂಡ್‌ನಲ್ಲಿ ಒನ್‌ವರ್ಲ್ಡ್ ಪ್ರಕಟಿಸಿದೆ.