ಮಕ್ಕಳ ವಿರುದ್ಧ ದೌರ್ಜನ್ಯ: ವಿಶ್ವಸಂಸ್ಥೆಯ ಕಪ್ಪು ಪಟ್ಟಿಯಲ್ಲಿ ಮುಂದುವರಿದ ಇಸ್ರೇಲ್
PC ; news.un.org
ಜಿನೆವಾ: ಸಂಘರ್ಷಪೀಡಿತ ಪ್ರದೇಶಗಳಲ್ಲಿ ಮಕ್ಕಳ ವಿರುದ್ಧ ನಿಂದನೆ, ಹಾನಿ ಎಸಗುವ ದೇಶಗಳ ಕಪ್ಪು ಪಟ್ಟಿಯಲ್ಲಿ ಸತತ ಎರಡನೇ ವರ್ಷ ಇಸ್ರೇಲ್ ಕಾಣಿಸಿಕೊಂಡಿರುವುದಾಗಿ ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಸಂಘರ್ಷಪೀಡಿತ ವಲಯಗಳಲ್ಲಿ ಮಕ್ಕಳ ವಿರುದ್ಧದ ಹಿಂಸಾಚಾರವು 2024ರಲ್ಲಿ ಅಸಾಮಾನ್ಯ ಮಟ್ಟಕ್ಕೆ ತಲುಪಿದ್ದು ಗಾಝಾ ಪಟ್ಟಿ ಮತ್ತು ಆಕ್ರಮಿತ ಪಶ್ಚಿಮದಂಡೆಯಲ್ಲಿ ಇಸ್ರೇಲ್ ಸೇನೆ ಅತೀ ಹೆಚ್ಚು ಉಲ್ಲಂಘನೆ ನಡೆಸಿದೆ ಎಂದು ಗುರುವಾರ ಬಿಡುಗಡೆಗೊಂಡ ಸಂಘರ್ಷಪೀಡಿತ ಪ್ರದೇಶದಲ್ಲಿ ಮಕ್ಕಳ ಸ್ಥಿತಿಗತಿ ಕುರಿತ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
18 ವರ್ಷಕ್ಕಿಂತ ಕೆಳಹರೆಯದ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆ ಪ್ರಕರಣಗಳಲ್ಲಿ 2023ಕ್ಕೆ ಹೋಲಿಸಿದರೆ ಕಳೆದ ವರ್ಷ 25% ಹೆಚ್ಚಳವಾಗಿದೆ. ಹತ್ಯೆ, ಲೈಂಗಿಕ ದೌರ್ಜನ್ಯ, ಶಾಲೆ ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಸೇರಿದಂತೆ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯ 41,370 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 8,554 ಪ್ರಕರಣಗಳು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ ಮತ್ತು ಇಸ್ರೇಲಿನಲ್ಲಿ ದಾಖಲಾಗಿದ್ದು 2,944 ಫೆಲೆಸ್ತೀನಿಯನ್ ಮಕ್ಕಳು ಹಾಗೂ 15 ಇಸ್ರೇಲಿ ಮಕ್ಕಳು ನಿಂದನೆ, ದೌರ್ಜನ್ಯಕ್ಕೆ ಒಳಗಾಗಿದ್ದಾರೆ. 2023ರ ಅಕ್ಟೋಬರ್ 7ರಿಂದ ಗಾಝಾದಲ್ಲಿ ಮುಂದುವರಿದಿರುವ ಇಸ್ರೇಲ್ ನ ಭೀಕರ ಬಾಂಬ್‍ದಾಳಿಯಲ್ಲಿ 1259 ಫೆಲೆಸ್ತೀನಿಯನ್ ಮಕ್ಕಳು ಸಾವನ್ನಪ್ಪಿದ್ದು 941 ಮಕ್ಕಳು ಗಾಯಗೊಂಡಿರುವುದಾಗಿ ವರದಿ ಹೇಳಿದೆ. ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪಶ್ಚಿಮದಂಡೆಯಲ್ಲಿ 97 ಫೆಲೆಸ್ತೀನಿಯನ್ ಮಕ್ಕಳು ಹತ್ಯೆಯಾಗಿರುವ ಬಗ್ಗೆಯೂ ಪರಿಶೀಲಿಸುವುದಾಗಿ ವಿಶ್ವಸಂಸ್ಥೆ ಹೇಳಿದೆ. ಕಳೆದ ವರ್ಷ ಲೆಬನಾನ್ ನಲ್ಲಿ ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳ ಸಾವು-ನೋವು ಸಂಭವಿಸಿರುವುದಾಗಿ ವರದಿ ಹೇಳಿದೆ. ಹಮಾಸ್, ಫೆಲೆಸ್ತೀನ್ ನ ಇಸ್ಲಾಮಿಕ್ ಜಿಹಾದ್ ಗುಂಪಿನ ಸಶಸ್ತ್ರ ವಿಭಾಗ ಅಲ್-ಖುಡ್ಸ್ ಬ್ರಿಗೇಡ್ ಕೂಡಾ ವಿಶ್ವಸಂಸ್ಥೆಯ ಕಪ್ಪುಪಟ್ಟಿಯಲ್ಲಿ ಎರಡನೇ ಬಾರಿ ಸೇರ್ಪಡೆಗೊಂಡಿದೆ.
ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ ಮತ್ತು ಇಸ್ರೇಲ್ ನಲ್ಲಿ ಮಕ್ಕಳ ವಿರುದ್ಧದ ದೌರ್ಜನ್ಯ ಹೆಚ್ಚಿರುವ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದು ಮಕ್ಕಳಿಗೆ ವಿಶೇಷ ರಕ್ಷಣೆಯ ಅಗತ್ಯವಿರುವ ಅಂತಾರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವಂತೆ ಇಸ್ರೇಲನ್ನು ಆಗ್ರಹಿಸಿದ್ದಾರೆ.