ಒತ್ತೆಯಾಳುಗಳನ್ನು ಮುಕ್ತಗೊಳಿಸದಿದ್ದರೆ ವಿರಾಮ ರಹಿತ ಯುದ್ಧ: ಇಸ್ರೇಲ್ ಸೇನಾ ಮುಖ್ಯಸ್ಥರ ಎಚ್ಚರಿಕೆ
ಇಸ್ರೇಲ್‍ನ ಸೇನಾ ಮುಖ್ಯಸ್ಥ ಲೆ|ಜ| ಇಯಾಲ್ ಝಾಮಿರ್ | PC : aljazeera.com
ಜೆರುಸಲೇಂ, ಆ.2: ಗಾಝಾದಲ್ಲಿ ಬಂಧನದಲ್ಲಿರುವ ಒತ್ತೆಯಾಳುಗಳನ್ನು ತ್ವರಿತವಾಗಿ ಬಿಡುಗಡೆಗೊಳಿಸಲು ಮಾತುಕತೆ ವಿಫಲವಾದರೆ ಗಾಝಾದಲ್ಲಿ ಹೋರಾಟಕ್ಕೆ ಯಾವುದೇ ಬಿಡುವು ನೀಡುವುದಿಲ್ಲ ಎಂದು ಇಸ್ರೇಲ್‍ನ ಸೇನಾ ಮುಖ್ಯಸ್ಥ ಲೆ|ಜ| ಇಯಾಲ್ ಝಾಮಿರ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಒತ್ತೆಯಾಳುಗಳ ಬಿಡುಗಡೆಗೆ ನಾವು ಒಪ್ಪಂದ ಮಾಡಿಕೊಳ್ಳಬಹುದೇ ಎಂಬುದು ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಭಾವಿಸುತ್ತೇನೆ. ಒಂದು ವೇಳೆ ಒಪ್ಪಂದ ಆಗದಿದ್ದರೆ ಯುದ್ಧವು ವಿರಾಮವಿಲ್ಲದೆ ಮುಂದುವರಿಯುತ್ತದೆ ಎಂದವರು ಹೇಳಿದ್ದಾರೆ.
ಗಾಝಾಕ್ಕೆ ಶುಕ್ರವಾರ ಆಗಮಿಸಿದ ಇಸ್ರೇಲ್ ಸೇನಾ ಮುಖ್ಯಸ್ಥ ಇಯಾಲ್ ಝಮೀರ್ ಯೋಧರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದರು. 2023ರ ಅಕ್ಟೋಬರ್‍ನಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ , 251 ಮಂದಿಯನ್ನು ಅಪಹರಿಸಿತ್ತು. ಇಸ್ರೇಲ್ ಮಿಲಿಟರಿಯ ಪ್ರಕಾರ ಇವರಲ್ಲಿ ಇನ್ನೂ 49 ಮಂದಿ ಗಾಝಾದಲ್ಲಿ ಒತ್ತೆಸೆರೆಯಲ್ಲಿ ಇದ್ದಾರೆ. ಇಬ್ಬರು ಒತ್ತೆಯಾಳುಗಳ ವೀಡಿಯೊವನ್ನು ಹಮಾಸ್ ಈ ವಾರ ಬಿಡುಗಡೆಗೊಳಿಸಿದೆ. ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಒಪ್ಪಂದ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತು ಅಮೆರಿಕ, ಈಜಿಪ್ಟ್ ಮತ್ತು ಖತರ್ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಮಾತುಕತೆ ವಿಫಲವಾದ ಬಳಿಕ ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳಿಸಲು ಇಸ್ರೇಲ್ ಯೋಜಿಸುತ್ತಿರುವುದಾಗಿ ವರದಿಯಾಗಿದೆ.