×
Ad

ಇಸ್ರೇಲ್ ನಿರ್ಬಂಧಕ್ಕೆ ವಿಶ್ವಸಂಸ್ಥೆಯನ್ನು ಆಗ್ರಹಿಸುವ ಅಭಿಯಾನಕ್ಕೆ ಚಾಲನೆ

ಇಸ್ರೇಲ್ ರಕ್ಷಣೆಗೆ ಅಮೆರಿಕ ಬಳಸುವ ವಿಟೋ ಅಮಾನ್ಯಗೊಳಿಸಲು ಒತ್ತಾಯ

Update: 2025-09-06 21:38 IST

PC :  aljazeera.com

ಚಿಕಾಗೋ, ಸೆ.6: ಇಸ್ರೇಲ್ ಮೇಲೆ ನಿರ್ಬಂಧ ವಿಧಿಸುವಂತೆ ವಿಶ್ವಸಂಸ್ಥೆಯನ್ನು ಆಗ್ರಹಿಸುವ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ರೇಲನ್ನು ರಕ್ಷಿಸಲು ಅಮೆರಿಕ ಬಳಸುವ ವೀಟೊವನ್ನು ಅಮಾನ್ಯಗೊಳಿಸುವಂತೆ ಆಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಅಮೆರಿಕದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ಡಾ| ಜಿಲ್ ಸ್ಟೆಯ್ನ್ ನೇತೃತ್ವದ `ದಿ ಲೈಫ್‍ಲೈನ್ ಫಾರ್ ಫೆಲೆಸ್ತೀನ್ ಕೋಲಿಷನ್' ಸಂಘಟನೆ ಆರಂಭಿಸಿರುವ ಅಭಿಯಾನವನ್ನು ಫೆಲೆಸ್ತೀನ್ ಪರ ಕಾರ್ಯಕರ್ತರು ಹಾಗೂ ಗುಂಪುಗಳು ಬೆಂಬಲಿಸಿವೆ. ಭದ್ರತಾ ಮಂಡಳಿಯನ್ನು ಮೀರಿ ಇಸ್ರೇಲಿನ ಮೇಲೆ ನಿರ್ಬಂಧ ವಿಧಿಸಲು, ಅದರ ಸದಸ್ಯತ್ವನ್ನು ಅಮಾನತುಗೊಳಿಸಲು, ಶಸ್ತ್ರಾಸ್ತ್ರ ನಿರ್ಬಂಧ ವಿಧಿಸಲು, ಗಾಝಾ ಮತ್ತು ಪಶ್ಚಿಮದಂಡೆಗೆ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗವನ್ನು ನಿಯೋಜಿಸಲು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಕಾನೂನು ಅಧಿಕಾರ ಹೊಂದಿದೆ ಎಂದು ಜಿಲ್ ಸ್ಟೆಯ್ನ್ ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಾಜಿ ಅಧಿಕಾರಿ ಕ್ರೆಗ್ ಮೊಖಿಬರ್ ಪ್ರತಿಪಾದಿಸಿದ್ದಾರೆ.

`ಭದ್ರತಾ ಮಂಡಳಿಯಲ್ಲಿ ಅಮೆರಿಕದ ವೀಟೊಗೆ ಜಗತ್ತು ಶರಣಾಗಬಾರದು. `ಶಾಂತಿಗಾಗಿ ಒಗ್ಗೂಡುವ' ಸಂದರ್ಭದಡಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ವಿಶೇಷ ಅಧಿಕಾರ ನೀಡಲಾಗುತ್ತದೆ. ಈ ರೀತಿ ಮಾಡಿರುವುದಕ್ಕೆ ಐತಿಹಾಸಿಕ ಪೂರ್ವ ನಿದರ್ಶನಗಳಿವೆ ಮತ್ತು ಸದಸ್ಯ ರಾಷ್ಟ್ರಗಳು ಈ ಅಸಾಮಾನ್ಯ ಕ್ರಮವನ್ನು ಕೈಗೊಳ್ಳಬಹುದಾಗಿದೆ. ಈ ರೀತಿಯ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮೂರನೇ ಎರಡರಷ್ಟು ಬಹುಮತ, ಅಂದರೆ 193 ಸದಸ್ಯರಲ್ಲಿ 127 ಸದಸ್ಯರ ಬೆಂಬಲದ ಅಗತ್ಯವಿದೆ' ಎಂದು ವಿಶ್ವಸಂಸ್ಥೆಯಲ್ಲಿ 30 ವರ್ಷ ಕಾರ್ಯನಿರ್ವಹಿಸಿದ ಮೊಖ್‍ಬಿರ್ ಹೇಳಿದ್ದಾರೆ.

ಗಾಝಾದಲ್ಲಿ ಇಸ್ರೇಲ್‍ ನ ಕ್ರಮಗಳು ವರ್ಣಭೇದ ದಕ್ಷಿಣ ಆಫ್ರಿಕಾದ ಹಿಂಸೆ ಮತ್ತು ದಬ್ಬಾಳಿಕೆಯನ್ನು ಮೀರಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕ್ರಮ ಕೈಗೊಳ್ಳಲು ವಿಫಲವಾದಾಗ 1950ರ `ಶಾಂತಿಗಾಗಿ ಒಗ್ಗೂಡುವ' ನಿರ್ಣಯದಡಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಭದ್ರತಾ ಮಂಡಳಿಯನ್ನು ಮೀರಿ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ.

ಇಸ್ರೇಲ್ ಗಾಝಾ ಮತ್ತು ಪಶ್ಚಿಮದಂಡೆಯಿಂದ 2025ರ ಸೆ.28ರೊಳಗೆ ಹಿಂದೆ ಸರಿಯಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಕಳೆದ ವರ್ಷ 124 ಸದಸ್ಯ ದೇಶಗಳು ಅನುಮೋದಿಸಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕ್ರಮ ಕೈಗೊಳ್ಳಲು ವಿಫಲವಾದಾಗ ಅಥವಾ ವೀಟೊ ಚಲಾವಣೆಯಾದಾಗ ಯಾವುದೇ ಸದಸ್ಯ ರಾಷ್ಟ್ರವು `ಶಾಂತಿಗಾಗಿ ಒಗ್ಗೂಡುವ' ಕ್ರಮದಡಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಿಶೇಷ ಅಧಿವೇಶನಕ್ಕೆ ಒತ್ತಾಯಿಸಬಹುದು.

ಅಧಿವೇಶನದಲ್ಲಿ ಪ್ರಸ್ತಾಪಿಸುವ ನಿರ್ಣಯವನ್ನು ಮೂರನೇ ಎರಡು ಬಹುಮತದಿಂದ ಅಂಗೀಕರಿಸಿದರೆ ವಿಶ್ವಸಂಸ್ಥೆಯು ಸದಸ್ಯ ರಾಷ್ಟ್ರಗಳಿಂದ ತುಕಡಿಗಳನ್ನು ಒಟ್ಟುಗೂಡಿಸಿ ಶಾಂತಿ ಪಾಲನಾ ಪಡೆಯನ್ನು ನಿಯೋಜಿಸಬಹುದು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News