ಇರಾನ್ ನ ರಕ್ಷಣಾ ಇಲಾಖೆ ಕೇಂದ್ರಕಚೇರಿ ಮೇಲೆ ಇಸ್ರೇಲ್ ದಾಳಿ; ಇರಾನ್‍ನ ಪ್ರತಿದಾಳಿಯಲ್ಲಿ ಇಸ್ರೇಲ್ ನಲ್ಲಿ 4 ಮಂದಿ ಸಾವು
ಸಾಂದರ್ಭಿಕ ಚಿತ್ರ | PC : x.com/ADRIANKennethK1
ಟೆಹ್ರಾನ್: ರವಿವಾರ ಇರಾನ್ ನ ಇಂಧನ ಉದ್ಯಮ ಮತ್ತು ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನೇರ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಗರೆದಿದ್ದು ಕನಿಷ್ಠ 4 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇರಾನ್ ನ ಪರಮಾಣು ಕಾರ್ಯಕ್ರಮಗಳನ್ನು ಭಗ್ನಗೊಳಿಸುವ ಉದ್ದೇಶದಿಂದ ಶುಕ್ರವಾರ ಬೆಳಿಗ್ಗೆ ಇಸ್ರೇಲ್ `ಆಪರೇಷನ್ ರೈಸಿಂಗ್ ಲಯನ್' ಅನ್ನು ಆರಂಭಿಸಿತ್ತು. ಇದಕ್ಕೆ ಪ್ರತಿಯಾಗಿ ಶನಿವಾರ ಇರಾನ್ `ಆಪರೇಷನ್ ಟ್ರೂ ಪ್ರಾಮಿಸ್ 3' ಕಾರ್ಯಾಚರಣೆಗೆ ಚಾಲನೆ ನೀಡಿದೆ.
ಟೆಹ್ರಾನ್ ನಲ್ಲಿನ ಇರಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಹಾಗೂ ಇರಾನ್ ನ ಪರಮಾಣು ಕಾರ್ಯಕ್ರಮದ ಜೊತೆ ಸಂಪರ್ಕವಿರುವ ಸ್ಥಳಗಳ ಮೇಲೆ ರವಿವಾರ ಇಸ್ರೇಲ್ ದಾಳಿ ನಡೆಸಿದ್ದರೆ, ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿಗಳ ಮಳೆಗರೆದಿದ್ದು ಗಲಿಲೀ ಪ್ರದೇಶದ ವಸತಿ ಕಟ್ಟಡದಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿರುವುದಾಗಿ ಇಸ್ರೇಲ್ ನ ತುರ್ತು ಸೇವಾ ಅಧಿಕಾರಿಗಳು ಹೇಳಿದ್ದಾರೆ.
ಇಸ್ರೇಲ್ ನ ಡ್ರೋನ್ ದಾಳಿಯಲ್ಲಿ ಇರಾನಿನ ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದಲ್ಲಿ ಪ್ರಬಲ ಸ್ಫೋಟ ಸಂಭವಿಸಿರುವುದಾಗಿ ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇಸ್ರೇಲ್ ನ ಯುದ್ಧವಿಮಾನಗಳಿಗೆ ಸಂಬಂಧಿಸಿದ ತೈಲ ಉತ್ಪಾದನಾ ವ್ಯವಸ್ಥೆಗಳಿಗೆ ಕ್ಷಿಪಣಿ ಅಪ್ಪಳಿಸಿರುವುದಾಗಿ ಇರಾನ್‍ನ ಅರೆ ಸೇನಾಪಡೆ `ರೆವೊಲ್ಯುಷನರಿ ಗಾರ್ಡ್' ಪ್ರತಿಪಾದಿಸಿದೆ.
ಇರಾನ್-ಇಸ್ರೇಲ್ ಯುದ್ಧಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು:
* ಇಸ್ರೇಲ್ ದಾಳಿಯಲ್ಲಿ ಇದುವರೆಗೆ 78 ಮಂದಿ ಸಾವನ್ನಪ್ಪಿದ್ದು 320ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವಿಶ್ವಸಂಸ್ಥೆಗೆ ಇರಾನ್ ನ ರಾಯಭಾರಿ ಹೇಳಿದ್ದಾರೆ. ಪ್ರತಿದಾಳಿಯಲ್ಲಿ ಇಸ್ರೇಲ್ ನಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ರವಿವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಇಸ್ರೇಲ್ ನ ಪ್ರಮುಖ ನಗರಗಳನ್ನು ಗುರಿಯಾಗಿಸಿ 100ಕ್ಕೂ ಅಧಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಡ್ರೋನ್ ಗಳ ಮೂಲಕ ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ.
* ಇರಾನ್ ಮೇಲಿನ ದಾಳಿ ಮುಂದುವರಿದರೆ ಇದಕ್ಕೆ ಇರಾನ್ ಇನ್ನಷ್ಟು ತೀವ್ರವಾಗಿ ಪ್ರತಿಕ್ರಿಯಿಸಲಿದೆ. ಇಸ್ರೇಲ್ ಗೆ ನೆರವಾಗುವ ದೇಶಗಳ ಮಿಲಿಟರಿ ನೆಲೆಗಳ ಮೇಲೆಯೂ ದಾಳಿ ನಡೆಸುವುದು ಇದರಲ್ಲಿ ಸೇರಿದೆ ಎಂದು ಇರಾನ್ ರವಿವಾರ ಎಚ್ಚರಿಕೆ ನೀಡಿದೆ.
* ಇರಾನ್ ನಲ್ಲಿರುವ ಮಿಲಿಟರಿ ಶಸ್ತ್ರಾಸ್ತ್ರ ಉತ್ಪಾದನಾ ಫ್ಯಾಕ್ಟರಿಗಳ ಸುತ್ತಮುತ್ತ ವಾಸಿಸುವ ಜನರು ತಕ್ಷಣ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಮಿಲಿಟರಿಯ ವಕ್ತಾರ ಕ| ಅವಿಚೇ ಆಡ್ರೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
* ಇಸ್ರೇಲ್ ನ ಬೆನ್ ಗ್ಯುರಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸತತ ಮೂರನೇ ದಿನವೂ ಮುಚ್ಚಿರುವುದಾಗಿ ಇಸ್ರೇಲ್ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೇಳಿದೆ. ವಿದೇಶದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರನ್ನು ಮರಳಿ ಕರೆತರಲು ಇಸ್ರೇಲ್ ವಿಮಾನಯಾನ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಜೋರ್ಡಾನ್ ಮತ್ತು ಈಜಿಪ್ಟ್‍ಗೆ ಭೂ ಗಡಿ ದಾಟುವಿಕೆ(ಬಾರ್ಡರ್ ಕ್ರಾಸಿಂಗ್) ತೆರೆದಿರುತ್ತದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.