ಗಾಝಾದ ನಿರಾಶ್ರಿತ ಕ್ರೈಸ್ತ, ಮುಸ್ಲಿಮರು ಆಶ್ರಯ ಪಡೆದಿದ್ದ ಚರ್ಚ್ ಮೇಲೆ ಇಸ್ರೇಲ್ ವಾಯು ದಾಳಿ
ಹೊಸದಿಲ್ಲಿ: ಇಸ್ರೇಲ್ ವಾಯು ದಾಳಿಗೆ ಗಾಝಾದಲ್ಲಿ ಸುಮಾರು 500 ಫೆಲೆಸ್ತೀನಿ ಕ್ರೈಸ್ತರು ಹಾಗೂ ಮುಸ್ಲಿಮರು ಆಶ್ರಯ ಪಡೆದಿದ್ದ ಆರ್ಥೊಡಾಕ್ಸ್ ಗ್ರೀಕ್ ಚರ್ಚ್ ನಾಶಗೊಂಡಿದೆ ಎಂದು ಹಮಾಸ್ ನಿಯಂತ್ರಿತ ಗಾಝಾದ ಆಂತರಿಕ ಸಚಿವಾಲಯ ಹೇಳಿದೆ. ಈ ದಾಳಿಗೆ ಇಸ್ರೇಲ್ ಕಾರಣ ಎಂದು ಚರ್ಚ್ ಆಡಳಿತವೂ ಹೇಳಿದ್ದು ಈ ದಾಳಿಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ.
ಈ ಗ್ರೀಕ್ ಆರ್ಥೊಡಾಕ್ಸ್ ಸೈಂಟ್ ಪೊರ್ಫಿರಿಯಸ್ ಚರ್ಚ್ ಗಾಝಾದಲ್ಲಿನ ಅತ್ಯಂತ ಹಳೆಯ ಚರ್ಚ್ ಆಗಿದೆ. ಅಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರೂ ಆಶ್ರಯ ಪಡೆದಿರುವುದರಿಂದ ಚರ್ಚ್ ಅನ್ನು ಗುರಿ ಮಾಡುವ ಸಾಧ್ಯತೆಯಿದೆ ಎಂದು ಅಲ್ಲಿನ ಧರ್ಮಗುರುಗಳು ಈ ಹಿಂದೆಯೇ ಆತಂಕ ವ್ಯಕ್ತಪಡಿಸಿದ್ದರು. ಈ ಚರ್ಚ್ ಮೇಲೆ ದಾಳಿ ನಡೆದರೆ ಅದು ಧರ್ಮದ ಮೇಲಿನ ದಾಳಿ ಮಾತ್ರವಲ್ಲದೆ ಮನುಕುಲದ ಮೇಲೆ ದಾಳಿ ನಡೆಸಿದಂತೆ ಎಂದು ಹೇಳಿದ್ದರು.
ಈ ಚರ್ಚ್ ಗೆ ಸಂಬಂಧಿಸಿದ ಆರ್ಡರ್ ಆಫ್ ಸೈಂಟ್ ಜಾರ್ಜ್ ಹೇಳಿಕೆ ಬಿಡುಗಡೆಗೊಳಿಸಿ ದಾಳಿಯಿಂದ ಚರ್ಚ್ ನಾಶವಾಗಿದೆ ಎಂದು ದೃಢಪಡಿಸಿದೆ. ಆರ್ಚ್ ಬಿಷಪ್ ಅಲೆಕ್ಸಿಯೋಸ್ ಅವರನ್ನು ಪತ್ತೆಹಚ್ಚಲಾಗಿದೆ ಅವರು ಜೀವಂತವಾಗಿದ್ದಾರೆ ಅವರಿಗೆ ಗಾಯವಾಗಿದೆಯೇ ಎಂದು ತಿಳಿದಿಲ್ಲ ಎಂದು ಅದು ಹೇಳಿದೆ.
ಅಲ್ಲಿದ್ದ 500ಕ್ಕೂ ಹೆಚ್ಚು ಮಂದಿಯ ಬಗ್ಗೆ ಏನೂ ತಿಳಿದಿಲ್ಲ ಎಂದು ಅದು ಹೇಳಿದೆ.
ಮಕ್ಕಳು, ಶಿಶುಗಳು ಸಹಿತ ನಿರಾಶ್ರಿತರು ಮಲಗಿದ್ದ ಸಂದರ್ಭ ಚರ್ಚಿನ ಎರಡು ಗೋಡೆಗಳಿಗೆ ಬಾಂಬ್ ಬಿದ್ದಿದೆ. ಸುಮಾರು 150-200 ಜನರು ಸಾವಿಗೀಡಾಗಿರುವ ಸಾಧ್ಯತೆಯಿದೆ ಎಂದು ಆರ್ಡರ್ ಆಫ್ ಸೈಂಟ್ ಜಾರ್ಜ್ ಹೇಳಿದೆ.