×
Ad

ಗಾಝಾ ಒಪ್ಪಂದಕ್ಕೆ ಇಸ್ರೇಲ್ ಭದ್ರತಾ ಸಂಪುಟ ಅನುಮೋದನೆ

Update: 2025-01-17 21:55 IST

 ನೆತನ್ಯಾಹು | PC : PTI 

ಜೆರುಸಲೇಂ: ಗಾಝಾ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‍ನ ಭದ್ರತಾ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಹಮಾಸ್‍ನ ಒತ್ತೆಸೆರೆಯಲ್ಲಿರುವ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲಿ ಜೈಲಿನಲ್ಲಿರುವ ಕೈದಿಗಳ ಬಿಡುಗಡೆ ಮತ್ತು 15 ತಿಂಗಳಿಂದ ಮುಂದುವರಿದಿರುವ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಕಲ್ಪಿಸುವ ಒಪ್ಪಂದ ಇದಾಗಿದೆ. ಬಹುನಿರೀಕ್ಷಿತ ಒಪ್ಪಂದವನ್ನು ರಾಜಕೀಯ- ಭದ್ರತಾ ಸಚಿವ ಸಂಪುಟ ಅನುಮೋದಿಸಿದ್ದು ಇದೀಗ ಒಪ್ಪಂದವನ್ನು ಅನುಮೋದಿಸಲು ಸರಕಾರ ಸಭೆ ಸೇರಲಿದೆ ಎಂದು ನೆತನ್ಯಾಹುರನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ನಮ್ಮ ಎಲ್ಲಾ ಒತ್ತೆಯಾಳುಗಳನ್ನೂ ವಾಪಾಸು ಕರೆತರುವುದು ಸೇರಿದಂತೆ(ಜೀವಂತ ಅಥವಾ ಮೃತ) ಇಸ್ರೇಲ್ ಸರಕಾರವು ಯುದ್ಧದ ಎಲ್ಲಾ ಗುರಿಗಳನ್ನೂ ಸಾಧಿಸಲು ಬದ್ಧವಾಗಿದೆ ಎಂದು ಇಸ್ರೇಲ್ ಪ್ರಧಾನಿಯ ಕಚೇರಿ ಹೇಳಿದೆ.

ಒತ್ತೆಯಾಳುಗಳ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ಒತ್ತೆಯಾಳುಗಳು ದೇಶಕ್ಕೆ ಮರಳುವಾಗ ಸ್ವಾಗತಿಸಲು ಎಲ್ಲಾ ಸಿದ್ಧತೆಗಳನ್ನೂ ನಡೆಸಲಾಗಿದೆ. ಒಂದು ವೇಳೆ ಸಚಿವ ಸಂಪುಟದ ಅನುಮೋದನೆ ದೊರೆತರೆ ಕದನ ವಿರಾಮ ಒಪ್ಪಂದ ರವಿವಾರ ಆರಂಭಗೊಳ್ಳಲಿದೆ ಎಂದು ಇಸ್ರೇಲ್ ಸರಕಾರದ ಮೂಲಗಳು ಹೇಳಿವೆ. ಒತ್ತೆಯಾಳು ಬಿಡುಗಡೆ ಒಪ್ಪಂದ ಅಂತಿಮಗೊಂಡಿದ್ದು ನಿಗದಿಯಾದಂತೆಯೇ ಜನವರಿ 19ರಂದು ಪ್ರಥಮ ಹಂತದಲ್ಲಿ 33 ಒತ್ತೆಯಾಳುಗಳು ಬಿಡುಗಡೆಗೊಳ್ಳಲಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದಕ್ಕೂ ಮುನ್ನ ಹೇಳಿಕೆ ನೀಡಿದ್ದರು.

ಎಲ್ಲಾ ರಾಜಕೀಯ, ಭದ್ರತೆ ಮತ್ತು ಮಾನವೀಯ ಅಂಶಗಳನ್ನು ಪರಿಶೀಲಿಸಿದ ನಂತರ ಮತ್ತು ಉದ್ದೇಶಿತ ಒಪ್ಪಂದವು ಯುದ್ದದ ಉದ್ದೇಶಗಳನ್ನು ಸಾಧಿಸಲು ಬೆಂಬಲಿಸುತ್ತದೆ ಎಂದು ಅರ್ಥ ಮಾಡಿಕೊಂಡ ನಂತರ ಕದನ ವಿರಾಮವನ್ನು ಅನುಮೋದಿಸಲು ಭದ್ರತಾ ಕ್ಯಾಬಿನೆಟ್ ಸರಕಾರಕ್ಕೆ ಶಿಫಾರಸು ಮಾಡಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆ ಒಪ್ಪಂದವನ್ನು ಪರಿಶೀಲಿಸಲಿದೆ ಎಂದು ಪ್ರಧಾನಿ ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News