×
Ad

ಇರಾನ್ ಮೇಲೆ ಇಸ್ರೇಲ್ ದಾಳಿಯಿಂದ ವಿಕಿರಣಶೀಲ ಮತ್ತು ರಾಸಾಯನಿಕ ಸೋರಿಕೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಐಎಇಎ ಮಾಹಿತಿ

Update: 2025-06-14 23:02 IST

ವಿಯೆನ್ನಾ: ಇರಾನ್‌ ನ ನಟಾನ್ಜ್ ಪರಮಾಣು ಸೌಲಭ್ಯದ ಮೇಲೆ ಇಸ್ರೇಲ್ ನಡೆಸಿದ ದಾಳಿಯು ವಿಕಿರಣಶೀಲ ಮತ್ತು ರಾಸಾಯನಿಕ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ(ಐಎಇಎ)ಯ ಪ್ರಧಾನ ನಿರ್ದೇಶಕ ರಾಫೆಲ್ ಗ್ರಾಸಿ ಶುಕ್ರವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ನಟಾನ್ಜ್ ಪರಮಾಣು ಸೌಲಭ್ಯದ ಮೇಲಿನ ಭಾಗವನ್ನು ಇಸ್ರೇಲ್ ನಾಶಪಡಿಸಿದೆ. ಸೌಲಭ್ಯದ ಭೂಗತ ಪುಷ್ಟೀಕರಣ ವ್ಯವಸ್ಥೆಗಳಿಗೆ ಹಾನಿಯ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಆದರೆ ವಿದ್ಯುತ್ ನಿಲುಗಡೆ ಕೇಂದ್ರಾಪಗಾಮಿಗಳ(ಸೆಂಟ್ರಿಫ್ಯೂಜ್ಸ್) ಮೇಲೆ ಪರಿಣಾಮ ಬೀರಿರಬಹುದು. ಸ್ಥಳದಲ್ಲಿ ವಿಕಿರಣಶೀಲ ಮತ್ತು ರಾಸಾಯನಿಕ ಮಾಲಿನ್ಯವಿದೆ ಎಂದವರು ಹೇಳಿದ್ದಾರೆ.

ಪ್ರಸ್ತುತ, ಫೋರ್ಡೋ ಇಂಧನ ಪುಷ್ಟೀಕರಣ ಸ್ಥಾವರ ಮತ್ತು ಇಸ್ಫಾಹಾನ್ ಸೌಲಭ್ಯಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್‌ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕ್ಷಣದಲ್ಲಿ, ಈ ಸೌಲಭ್ಯಗಳ ಸುತ್ತಲೂ ಮಿಲಿಟರಿ ಚಟುವಟಿಕೆ ನಡೆಯುತ್ತಿದೆ ಎಂದು ಸೂಚಿಸುವುದನ್ನು ಬಿಟ್ಟು ನಮ್ಮಲ್ಲಿ ಹೆಚ್ಚಿನ ಮಾಹಿತಿಯಿಲ್ಲ ಎಂದವರು 15 ಸದಸ್ಯರ ಭದ್ರತಾ ಮಂಡಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.

`ರೈಸಿಂಗ್ ಲಯನ್' ಎಂಬ ಸಂಕೇತನಾಮದ ಈ ದಾಳಿಯು ಇರಾನ್‌ ನ ಪರಮಾಣು ಸಾಮರ್ಥ್ಯವನ್ನು ಕಿತ್ತೊಗೆಯುವ ಉದ್ದೇಶವನ್ನು ಹೊಂದಿದ್ದು ಇರಾನ್‌ ನ ಹಲವಾರು ಅಧಿಕ ಸಾಮರ್ಥ್ಯದ ಮಿಲಿಟರಿ ಹಾಗೂ ಪರಮಾಣು ಸ್ಥಾಪನೆಗಳನ್ನು ಗುರಿಯಾಗಿಸಿ ನಡೆಸಲಾಗಿದೆ.

ನಟಾನ್ಜ್ ಸ್ಥಾವರದ ಬಳಿ ಬಾಹ್ಯ ವಿಕಿರಣಶೀಲತೆಯ ಮಟ್ಟವು ಹೆಚ್ಚಿಲ್ಲ ಮತ್ತು ಸೋರಿಕೆಯನ್ನು ಆಂತರಿಕವಾಗಿ ಪತ್ತೆಹಚ್ಚಲಾಗಿದೆ ಎಂದು ಐಎಎಫ್‍ಎ ಬಳಿಕ ದೃಢಪಡಿಸಿದ್ದು ಇದನ್ನು ಸೂಕ್ತ ರಕ್ಷಣಾ ಕ್ರಮಗಳ ಮೂಲಕ ನಿರ್ವಹಿಸಬಹುದಾಗಿದೆ ಎಂದು ಗ್ರಾಸಿ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನೇರವಾಗಿ ಪರಿಶೀಲನೆ ನಡೆಸಲು ಇರಾನ್‍ ಗೆ ಭೇಟಿ ನೀಡಲು ಬಯಸಿರುವುದಾಗಿ ಗ್ರಾಸಿ ಹೇಳಿದ್ದಾರೆ. ಐಎಇಎ ಆಡಳಿತ ಮಂಡಳಿಯನ್ನುದ್ದೇಶಿಸಿ ಮಾತನಾಡಿದ ಅವರು `ಇನ್ನಷ್ಟು ಉಲ್ಬಣಿಸುವುದನ್ನು ತಡೆಯಲು ಗರಿಷ್ಠ ಸಂಯಮ ವಹಿಸುವಂತೆ ಎಲ್ಲಾ ಪಕ್ಷಗಳನ್ನೂ ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News