ಜಪಾನ್ ಪ್ರಧಾನಿ ಶಿಂಝೊ ಅಬೆ ಹತ್ಯೆಯನ್ನು ಒಪ್ಪಿಕೊಂಡ ಆರೋಪಿ
ಟೋಕಿಯೊ, ಅ. 28: 2022ರಲ್ಲಿ ನಡೆದ ಜಪಾನ್ ಪ್ರಧಾನಿ ಶಿಂಝೊ ಅಬೆ ಹತ್ಯೆ ಪ್ರಕರಣದ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದ ವಿಚಾರಣೆ ಮಂಗಳವಾರ ಆರಂಭವಾದಾಗ, ಪ್ರಾಸಿಕ್ಯೂಟರ್‌ಗಳು ಓದಿ ಹೇಳಿದ ಎಲ್ಲಾ ಆರೋಪಗಳನ್ನು 45 ವರ್ಷದ ಟೆಟ್ಸುಯ ಯಮಗಮಿ ಒಪ್ಪಿಕೊಂಡಿದ್ದಾನೆ ಎಂದು ಜಪಾನ್ ಸುದ್ದಿ ಚಾನೆಲ್ ಎನ್‌ಎಚ್‌ಕೆ ವರದಿ ಮಾಡಿದೆ.
ಅತಿ ಹೆಚ್ಚು ಅವಧಿ ಜಪಾನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಶಿಂಝೊ ಅಬೆಯನ್ನು ಕೊಂದಿರುವ ಮತ್ತು ಶಸ್ತ್ರಾಸ್ತ್ರ ಕಾಯ್ದೆಗಳನ್ನು ಉಲ್ಲಂಘಿಸಿರುವ ಆರೋಪಗಳನ್ನು ಯಮಗಮಿ ಮೇಲೆ ಹೊರಿಸಲಾಗಿತ್ತು.
‘‘ನನ್ನ ಮೇಲಿನ ಎಲ್ಲಾ ಆರೋಪಗಳು ಸರಿಯಾಗಿವೆ’’ ಎಂದು ಆರೋಪಿಯು ನ್ಯಾಯಾಲಯದ ಎದುರು ಒಪ್ಪಿಕೊಂಡನು.
2022 ಜುಲೈ 8ರಂದು ಜಪಾನ್‌ನ ಪಶ್ಚಿಮದ ನಗರ ನಾರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಅಬೆ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಯಮಗಮಿಯನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು.
ಶಿಂಝೊ ಅಬೆಯ ಲಿಬರಲ್ ಡೆಮಾಕ್ರಟಿಕ್ ಪಕ್ಷವು ಯೂನಿಫಿಕೇಶನ್ ಚರ್ಚ್‌ನೊಂದಿಗೆ ಹೊಂದಿರುವ ನಂಟಿನ ಬಗ್ಗೆ ಆಕ್ರೋಶಗೊಂಡು ಆರೋಪಿಯು ಕೊಲೆ ನಡೆಸಿದ್ದಾನೆ ಎನ್ನಲಾಗಿದೆ.
ಆರೋಪಿ ಯಮಗಮಿಯ ತಾಯಿ ದಕ್ಷಿಣ ಕೊರಿಯದ ಧಾರ್ಮಿಕ ಗುಂಪು ಯೂನಿಫಿಕೇಶನ್ ಚರ್ಚ್‌ಗೆ 100 ಮಿಲಿಯ ಯೆನ್ (ಸುಮಾರು 5.85 ಕೋಟಿ ರೂಪಾಯಿ) ದೇಣಿಗೆ ನೀಡಿದ್ದರು. ಈ ದೇಣಿಗೆಯ ಬಳಿಕ ಆರೋಪಿಯ ಕುಟುಂಬದ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿತ್ತು ಎನ್ನಲಾಗಿದೆ. ಹಾಗಾಗಿ, ಶಿಂರೊ ಅಬೆಯನ್ನು ಕೊಲ್ಲುವ ಮೂಲಕ ಯೂನಿಫಿಕೇಶನ್ ಚರ್ಚ್‌ನ ಮೇಲಿದ್ದ ಆಕ್ರೋಶವನ್ನು ಹೊರಹಾಕಿದ್ದನು ಎಂಬುದಾಗಿ ಪೊಲೀಸರು ಹೇಳಿದ್ದಾರೆ.