ಜಪಾನ್ ರಶ್ಯದ ಇಂಧನ ಖರೀದಿ ನಿಲ್ಲಿಸುವ ನಿರೀಕ್ಷೆಯಿದೆ: ಅಮೆರಿಕ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್, ಅ.17: ರಶ್ಯದಿಂದ ಇಂಧನ ಖರೀದಿಸುವುದನ್ನು ಜಪಾನ್ ನಿಲ್ಲಿಸುವ ನಿರೀಕ್ಷೆಯಿದೆ ಎಂದು ಅಮೆರಿಕಾದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಹೇಳಿದ್ದಾರೆ.
ಜಪಾನ್‍ನ ವಿತ್ತ ಸಚಿವ ಕತ್ಸುನೊಬು ಕಟೋ ಜೊತೆ ಅಮೆರಿಕಾ-ಜಪಾನ್ ಆರ್ಥಿಕ ಸಂಬಂಧಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದ್ದು ಈ ಸಂದರ್ಭ ರಶ್ಯದ ತೈಲ ಆಮದನ್ನು ಜಪಾನ್ ನಿಲ್ಲಿಸುವುದಾಗಿ ಟ್ರಂಪ್ ಆಡಳಿತ ನಿರೀಕ್ಷಿಸುತ್ತದೆ ಎಂದು ತಿಳಿಸಿದ್ದೇನೆ.
ಉಕ್ರೇನ್‍ನಲ್ಲಿ ನ್ಯಾಯಯುತ ಶಾಂತಿಯನ್ನು ಸಾಧಿಸಲು ಜಿ7 ದೇಶಗಳೊಂದಿಗೆ ಸಮನ್ವಯ ಸಾಧಿಸುವ ಮೂಲ ತತ್ವದ ಆಧಾರದ ಮೇಲೆ ಜಪಾನ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವುದಾಗಿ ಬೆಸ್ಸೆಂಟ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಶ್ಯದ ತೈಲವನ್ನು ಖರೀದಿಸುವ ದೇಶಗಳನ್ನು ಗುರಿಯಾಗಿಸುವ ಮೂಲಕ ಉಕ್ರೇನ್ ನಲ್ಲಿನ ಯುದ್ಧಕ್ಕಾಗಿ ರಶ್ಯದ ವಿರುದ್ಧದ ನಿರ್ಬಂಧಗಳನ್ನು ಸಂಘಟಿಸಲು ಮತ್ತು ತೀವ್ರಗೊಳಿಸಲು ಜಿ7 ದೇಶಗಳ ಗುಂಪು(ಅಮೆರಿಕ, ಜಪಾನ್, ಕೆನಡಾ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ) ಈ ತಿಂಗಳ ಆರಂಭದಲ್ಲಿ ಒಪ್ಪಿಕೊಂಡಿವೆ.