×
Ad

ಚಂದ್ರನ ಮೇಲಿಳಿಯಲು ಜಪಾನ್ ಗಗನಯಾತ್ರಿಗೆ ಅವಕಾಶ

Update: 2024-04-11 22:08 IST

Photo : JAXA/NASA

ವಾಷಿಂಗ್ಟನ್: ಅಮೆರಿಕನ್ನರನ್ನು ಹೊರತುಪಡಿಸಿ ಚಂದ್ರನ ಮೇಲೆ ಇಳಿದ ವಿಶ್ವದ ಮೊದಲ ಗಗನಯಾತ್ರಿ ಎಂಬ ಹಿರಿಮೆಗೆ ಜಪಾನ್‍ನ ಗಗನಯಾತ್ರಿ ಪಾತ್ರವಾಗಲಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ದ ಮುಂಬರುವ ಚಂದ್ರಯಾನ ಯೋಜನೆಯಲ್ಲಿ ಜಪಾನ್‍ನ ಇಬ್ಬರು ಗಗನಯಾತ್ರಿಗಳು ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಒಬ್ಬರು ಅಮೆರಿಕನ್ನರನ್ನು ಹೊರತುಪಡಿಸಿ ಚಂದಿರನ ಮೇಲಿಳಿದ ವಿಶ್ವದ ಮೊತ್ತಮೊದಲ ಗಗನಯಾನಿ ಎಂಬ ಹಿರಿಮೆಗೆ ಪಾತ್ರವಾಗಲಿದ್ದಾರೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ ಜತೆಗಿನ ಜಂಟಿ ಸುದ್ಧಿಗೋಷ್ಟಿಯಲ್ಲಿ ಬೈಡನ್ ಘೋಷಿಸಿದರು. ಇದೊಂದು ದೊಡ್ಡ ಸಾಧನೆಯಾಗಲಿದೆ ಎಂದು ಜಪಾನ್ ಪ್ರಧಾನಿ ಶ್ಲಾಘಿಸಿದ್ದು ಇದಕ್ಕೆ ಬದಲಾಗಿ ಈ ಯೋಜನೆಗೆ ರೋವರ್ ನೌಕೆಯನ್ನು ಜಪಾನ್ ಪೂರೈಸಲಿದೆ ಎಂದು ಘೋಷಿಸಿದರು. 50ಕ್ಕೂ ಅಧಿಕ ವರ್ಷಗಳ ಬಳಿಕ ಚಂದಿರನಲ್ಲಿ ಮಾನವನನ್ನು ಇಳಿಸುವ ಯೋಜನೆಯನ್ನು ಅಮೆರಿಕ ರೂಪಿಸಿದೆ. 1969ರಿಂದ 1972ರವರೆಗೆ 12 ಅಮೆರಿಕನ್ನರು ಅಪೋಲೊ ಯೋಜನೆಯ ಮೂಲಕ ಚಂದಿರನ ಮೇಲೆ ಕಾಲಿಟ್ಟಿದ್ದರು. ಇದೀಗ 2026ರಲ್ಲಿ ನಿಗದಿಯಾಗಿರುವ ಕಾರ್ಯಾಚರಣೆಯಲ್ಲಿ ಕೇವಲ ಅಮೆರಿಕನ್ನರು ಮಾತ್ರ ಚಂದಿರನ ಮೇಲೆ ಇಳಿಯುವುದಿಲ್ಲ ಎಂದು ನಾಸಾದ ಮುಖ್ಯಸ್ಥ ಬಿಲ್ ನೆಲ್ಸನ್ ಹೇಳಿದ್ದರು.

ಈ ಮಧ್ಯೆ, 2030ರ ಒಳಗೆ ಚಂದಿರನ ಮೇಲೆ ಮಾನವನನ್ನು ಇಳಿಸುವುದಾಗಿ ಚೀನಾ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News