ಭಾರತದ ಮೇಲೆ ಸುಂಕಾಸ್ತ್ರದಿಂದ ಅಮೆರಿಕಕ್ಕೆ ದುಷ್ಪರಿಣಾಮ; ಟ್ರಂಪ್ ರ ಮಾಜಿ ಆಪ್ತ ಸಹಾಯಕ ಜಾನ್ ಬೊಲ್ಟನ್ ಆತಂಕ
ಟ್ರಂಪ್ ರ ಮಾಜಿ ಆಪ್ತ ಸಹಾಯಕ ಜಾನ್ ಬೊಲ್ಟನ್ (PC | PTI)
ವಾಶಿಂಗ್ಟನ್,ಆ.8: ಭಾರತವನ್ನು ರಶ್ಯ ಹಾಗೂ ಚೀನಾದ ಪ್ರಭಾವದಿಂದ ಹೊರತರಲು ದಶಕಗಳಿಂದ ಅಮೆರಿಕವು ನಡೆಸುತ್ತಿರುವ ಪ್ರಯತ್ನಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾಳುಗೆಡವಿದ್ದಾರೆಂದು ಅವರ ಮಾಜಿ ಆಪ್ತಸಹಾಯಕ ಜಾನ್ ಬೊಲ್ಟನ್ ಶುಕ್ರವಾರ ಆಪಾದಿಸಿದ್ದಾರೆೆ.
ರಶ್ಯದಿಂದ ತೈಲ ಖರೀದಿಗಾಗಿ ಭಾರತದ ಮೇಲೆ ಟ್ರಂಪ್ ಆಡಳಿತವು ಭಾರೀ ಪ್ರಮಾಣದ ಸುಂಕವನ್ನು ವಿಧಿಸಿರುವ ಬಗ್ಗೆಯೂ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಮೇಲೆ ಅಮೆರಿಕ ಶೇ.50ರಷ್ಟು ಸುುಂಕವಿಧಿಸಿರುವುದು ಅಮೆರಿಕದ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಟ್ರಂಪ್ ಆಡಳಿತದ ಈ ಕ್ರಮಕ್ಕೆ ಭಾರತವು ಅತ್ಯಂತ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ತನ್ನ ಮೇಲೆ ವಿಧಿಸಿರುವಷ್ಟು ಸುಂಕವನ್ನು ಚೀನಾದ ಮೇಲೆ ವಿಧಿಸಲಾಗಿಲ್ಲವೆಂದು ಅದು ಭಾವಿಸಿದೆಯೆಂದು ಬೊಲ್ಟನ್ ತಿಳಿಸಿದರು.
ಸಿಎನ್‌ಎನ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ರಶ್ಯದ ಹಿತಾಸಕ್ತಿ ಧಕ್ಕೆಯುಂಟು ಮಾಡುವ ಉದ್ದೇಶದಿಂದ ಅಮೆರಿಕವು ವಿಧಿಸಿರುವ ಹೆಚ್ಚುವರಿ ಸುಂಕವು ಭಾರತವನ್ನು ರಶ್ಯ ಹಾಗೂ ಚೀನಾದ ಹತ್ತಿರಕ್ಕೆ ತರಲಿದೆ ಎಂದರು.
ಅಮೆರಿಕ ವಿದೇಶಾಂಗ ನೀತಿಯ ತಜ್ಞರಾದ ಕ್ರಿಸ್ಟೋಫರ್ ಪಡಿಲ್ಲಾ ಅವರು ಕೂಡಾ ಅಮೆರಿಕ ವಿಧಿಸಿರುವ ವಿಪರೀತ ಸುಂಕದಿಂದಾಗಿ ಭಾರತ-ಅಮೆರಿಕ ಬಾಂಧವ್ಯಕ್ಕೆ ದೀರ್ಘಾವಧಿಯ ಹಾನಿಯಾಗಲಿದೆಯೆಂದು ಹೇಳಿದ್ದಾರೆ.
‘‘ಸುಂಕಹೇರಿಕೆಯಂತಹ ಕ್ರಮಗಳು ಚಿರಕಾಲ ನೆನಪಿನಲ್ಲಿ ಉಳಿಯಲಿದ್ದು, ಅಮೆರಿಕವು ನಂಬಿಕಸ್ಥ ಪಾಲುದಾರನೇ ಎಂಬ ಪ್ರಶ್ನೆಯನ್ನು ಭಾರತದಲ್ಲಿ ಹುಟ್ಟುಹಾಕಲಿದೆ ’’ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ‘ ದಿ ಹಿಲ್’ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು,ಟ್ರಂಪ್ ಅವರ ಹೆಚ್ಚುವರಿ ಸುಂಕ ವಿಧಿಸುವಿಕೆಯು ಭಾರತವು ರಶ್ಯದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವ ವಿಫಲವಾಗಿದೆ ಎಂದಿದ್ದಾರೆ.