×
Ad

ಎಲಾನ್ ಮಸ್ಕ್ ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಲ್ಯಾರಿ ಎಲಿಸನ್

Update: 2025-09-11 16:08 IST

Photo | AFP

ಹೊಸದಿಲ್ಲಿ: ಜಾಗತಿಕ ಸಂಪತ್ತಿನ ಶ್ರೇಯಾಂಕದಲ್ಲಿ ಮಹತ್ತರ ಬದಲಾವಣೆಯಾಗಿದೆ. ಒರಾಕಲ್ ಸಂಸ್ಥೆಯ ಸಹಸಂಸ್ಥಾಪಕ ಹಾಗೂ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಲ್ಯಾರಿ ಎಲಿಸನ್ ಅವರು ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ, ಎಲಿಸನ್ ಅವರ ನಿವ್ವಳ ಸಂಪತ್ತು ಕೇವಲ ಒಂದು ದಿನದಲ್ಲಿ 8.38 ಲಕ್ಷ ಕೋಟಿ ರೂಪಾಯಿ(ಸುಮಾರು 101 ಬಿಲಿಯನ್ ಡಾಲರ್) ಏರಿಕೆಯಾಗಿದ್ದು, ಒಟ್ಟು 32.62 ಲಕ್ಷ ಕೋಟಿ ರೂಪಾಯಿ (ಸುಮಾರು 393 ಬಿಲಿಯನ್ ಡಾಲರ್ ) ತಲುಪಿದೆ. ಇದು ಬಿಲಿಯನೇರ್ಸ್ ಪಟ್ಟಿಯ ಇತಿಹಾಸದಲ್ಲೇ ದಾಖಲಾದ ಅತಿದೊಡ್ಡ ಏಕದಿನ ಸಂಪತ್ತಿನ ಏರಿಕೆಯಾಗಿದೆ.

ಒರಾಕಲ್‌ನ  ಇತ್ತೀಚಿನ ತ್ರೈಮಾಸಿಕ ಲಾಭ ವರದಿ ನಿರೀಕ್ಷೆಗೂ ಮೀರಿದ ಫಲಿತಾಂಶಗಳನ್ನು ತಂದುಕೊಟ್ಟಿದೆ. ಬುಕಿಂಗ್‌ ಗಳಲ್ಲಿ ಏರಿಕೆ ಮತ್ತು ಕ್ಲೌಡ್ ಸೇವೆಗಳ ಭವಿಷ್ಯದ ದೃಢವಾದ ಬೆಳವಣಿಗೆಯ ನಿರೀಕ್ಷೆಯು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿ, ಕಂಪೆನಿಯ ಷೇರು ಬೆಲೆಗಳನ್ನು 41% ಏರಿಸಿದೆ. ಒರಾಕಲ್‌ ನ ಒಟ್ಟು ಷೇರುಗಳಲ್ಲಿ 41% ಹಂಚಿಕೆಯ ಷೇರುಗಳನ್ನು ಹೊಂದಿರುವ ಎಲಿಸನ್, ಈ ಏರಿಕೆಯಿಂದಲೇ ಅಪಾರ ಲಾಭ ಪಡೆದು ತಮ್ಮ ಸಂಪತ್ತನ್ನು ಇತಿಹಾಸದಲ್ಲೇ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಇದಕ್ಕೆ ವಿರುದ್ಧವಾಗಿ, ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ 2025ರಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದು, ಇತ್ತೀಚೆಗೆ ಷೇರು ಮೌಲ್ಯ 13% ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಮಸ್ಕ್ ಅವರ ಸಂಪತ್ತು 31.95 ಲಕ್ಷ ಕೋಟಿ ರೂಪಾಯಿ (ಸುಮಾರು 385 ಬಿಲಿಯನ್ ಡಾಲರ್) ಮಟ್ಟಕ್ಕೆ ಇಳಿದಿದ್ದು, ಸುಮಾರು ಒಂದು ವರ್ಷಗಳ ಕಾಲ ಅಗ್ರಸ್ಥಾನದಲ್ಲಿದ್ದ ಅವರು ಈಗ ಎರಡನೇ ಸ್ಥಾನಕ್ಕೆ ಸರಿದಿದ್ದಾರೆ. ಟೆಸ್ಲಾ ಮಂಡಳಿಯ ಕಾರ್ಯಕ್ಷಮತೆ ಆಧಾರಿತ ಪರಿಹಾರ ಯೋಜನೆ ಯಶಸ್ವಿಯಾದರೆ, ಮಸ್ಕ್ ಮುಂದಿನ ವರ್ಷಗಳಲ್ಲಿ ಮತ್ತೆ ದಾಖಲೆ ಬರೆಯುವ ಸಾಧ್ಯತೆ ಇದೆ.

81 ವರ್ಷದ ಎಲಿಸನ್ ತಮ್ಮ ದೀರ್ಘ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಿಶ್ವದ ಶ್ರೀಮಂತರ ಪಟ್ಟಿಯ ಅಗ್ರಸ್ಥಾನಕ್ಕೇರಿದ್ದಾರೆ. ಅವರು 1970ರ ದಶಕದಲ್ಲಿ ಒರಾಕಲ್ ಸ್ಥಾಪಿಸಿ, ಉದ್ಯಮ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕ್ರಾಂತಿ ತಂದರು. ಸಿಇಒ ಹುದ್ದೆಯಿಂದ ಕೆಳಗಿಳಿದ ನಂತರವೂ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಕಂಪೆನಿಯ ನಾವೀನ್ಯತೆ ಕಾರ್ಯತಂತ್ರವನ್ನು ಮುನ್ನಡೆಸುತ್ತಿದ್ದಾರೆ. ಅವರ ದಿಟ್ಟ ನಿರ್ಧಾರಗಳ ಫಲವಾಗಿ ಒರಾಕಲ್ ಇಂದು ಅಮೆಝಾನ್ ವೆಬ್ ಸರ್ವೀಸಸ್ ಹಾಗೂ ಮೈಕ್ರೋಸಾಫ್ಟ್ ಅಜೂರ್‌ ಗೆ ತೀವ್ರ ಪೈಪೋಟಿ ನೀಡುತ್ತಿದೆ.

2025ರ ಸೆಪ್ಟೆಂಬರ್ 10ರ ಪ್ರಕಾರ ವಿಶ್ವದ ಅಗ್ರ 3 ಶ್ರೀಮಂತರ ಪಟ್ಟಿಯಲ್ಲಿ ಲ್ಯಾರಿ ಎಲಿಸನ್ 32.62 ಲಕ್ಷ ಕೋಟಿ ರೂಪಾಯಿ (ಸುಮಾರು 393 ಬಿಲಿಯನ್ ಡಾಲರ್ ) ಸಂಪತ್ತಿನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಎಲಾನ್ ಮಸ್ಕ್ 31.95 ಲಕ್ಷ ಕೋಟಿ ರೂಪಾಯಿ (ಸುಮಾರು 385 ಬಿಲಿಯನ್ ಡಾಲರ್ ) ಸಂಪತ್ತಿನೊಂದಿಗೆ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಬೆರ್ನಾರ್ಡ್ ಆರ್ನಾಲ್ಟ್ 29.77 ಲಕ್ಷ ಕೋಟಿ ರೂಪಾಯಿ (ಸುಮಾರು 359 ಬಿಲಿಯನ್ ಡಾಲರ್ ) ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News