ಮ್ಯಾಕ್ರೋನ್, ಸ್ಟಾರ್ಮರ್ ಮತ್ತು ಮೆರ್ಝ್ ವಿರುದ್ಧದ ಕೊಕೇನ್ ಆರೋಪ ಕುರಿತು ಫ್ರೆಂಚ್ ಮಾಧ್ಯಮಗಳು ಹೇಳಿದ್ದೇನು?
PC : X \ @RealAlexJones
ಹೊಸದಿಲ್ಲಿ: ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಝ್ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೀಡಿಯೊವನ್ನು ರವಿವಾರ ಪೋಸ್ಟ್ ಮಾಡಿರುವ ರೇಡಿಯೊ ನಿರೂಪಕ ಅಲೆಕ್ಸ್ ಜೋನ್ಸ್ ಎಂಬವರು ಕ್ಯಾಮೆರಾಗಳು ಸಕ್ರಿಯಗೊಂಡಾಗ ಈ ಮೂವರೂ ‘ಕೊಕೇನ್ ಚೀಲ’ವೊಂದನ್ನು ಮರೆಮಾಡಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.
‘ಕೀವ್‌ನಲ್ಲಿ ಮಾತುಕತೆಗಳಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಮ್ಯಾಕ್ರೋನ್,ಸ್ಟಾರ್ಮರ್ ಮತ್ತು ಮೆರ್ಝ್ ವೀಡಿಯೊದಲ್ಲಿ ಸೆರೆಯಾಗಿದ್ದಾರೆ. ಟೇಬಲ್ ಮೇಲಿದ್ದ ಬಿಳಿಯ ಪುಡಿಯ ಚೀಲವೊಂದನ್ನು ಮ್ಯಾಕ್ರೋನ್ ತಕ್ಷಣ ಜೇಬಿಗಿಳಿಸಿದ್ದರು ಮತ್ತು ಮೆರ್ಝ್ ಚಮಚವನ್ನು ಮರೆ ಮಾಡಿದ್ದರು. ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್‌ಸ್ಕಿ ಕೊಕೇನ್ ಗೀಳು ಹೊಂದಿದ್ದಾರೆ ಎನ್ನುವುದು ಗೊತ್ತಿರುವುದೇ ಆಗಿದೆ ಮತ್ತು ಅವರು ಈ ಮೂವರೂ ನಾಯಕರ ಆತಿಥೇಯರಾಗಿದ್ದರು. ಹೀಗಾಗಿ ವಿವರಣೆಯ ಅಗತ್ಯವಿಲ್ಲ. ಮೂವರೂ ನಾಯಕರು ನಶೆಯಲ್ಲಿದ್ದಂತೆ ಕಂಡು ಬಂದಿತ್ತು’ ಎಂದು ಜೋನ್ಸ್‌ನ ಎಕ್ಸ್‌ನಲ್ಲಿಯ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅವರು ಜೊತೆಗೆ ವೀಡಿಯೊವನ್ನೂ ಲಗತ್ತಿಸಿದ್ದಾರೆ.
ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಫ್ರೆಂಚ್ ಮಾಧ್ಯಮಗಳು ಸ್ಪಷ್ಟೀಕರಣ ನೀಡಿವೆ.
DEVELOPING SCANDAL: Macron, Starmer, and Merz caught on video on their return from Kiev. A bag of white powder on the table. Macron quickly pockets it, Merz hides the spoon. No explanation given. Zelensky, known cocaine enthusiast, had just hosted them. All three of the “leaders”… pic.twitter.com/M2h5Fhzo5h
— Alex Jones (@RealAlexJones) May 11, 2025
ಫ್ರೆಂಚ್ ದೈನಿಕ ‘ಲಿಬರೇಷನ್’ ಜೋನ್ಸ್ ಹೇಳಿಕೆಗಳನ್ನು ಆಧಾರರಹಿತ ಎಂದು ಬಣ್ಣಿಸಿದ್ದು, ಮ್ಯಾಕ್ರೋನ್ ಕೈಯಲ್ಲಿ ಕರವಸ್ತ್ರ ಹಿಡಿದುಕೊಂಡಿದ್ದರು ಮತ್ತು ಮೆಝ್ ಬಳಿ ಪಾನೀಯವನ್ನು ಕಲಕುವ ಸಾಧನವಿತ್ತು ಎಂದು ಹೇಳಿದೆ. ಕೊಕೇನ್ ಊಹಾಪೋಹಗಳು ‘ಪಿತೂರಿ ಸಿದ್ಧಾಂತ’ದ ಭಾಗವಾಗಿವೆ ಎಂದು ಹೇಳಿದೆ.
ಮ್ಯಾಕ್ರೋನ್,ಸ್ಟಾರ್ಮರ್ ಮತ್ತು ಮೆರ್ಝ್ ರಾತ್ರಿ ಪ್ರಯಾಣಿಸುತ್ತಿದ್ದಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿತ್ತು. ರಶ್ಯಾದೊಂದಿಗೆ ಯುದ್ಧದಲ್ಲಿ ಉಕ್ರೇನ್‌ನ್ನು ಬೆಂಬಲಿಸುವಂತೆ ಫ್ರಾನ್ಸ್ ತನ್ನ ಪಾಲುದಾರರನ್ನು ಮನವೊಲಿಸುತ್ತಿದೆ ಎಂದು ಮ್ಯಾಕ್ರೋನ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದರು.
ಕೊಕೇನ್ ಆರೋಪಗಳಿಗೆ ಫ್ರೆಂಚ್,ಬ್ರಿಟಿಷ್ ಮತ್ತು ಜರ್ಮನ್ ಸರಕಾರಗಳು ಇನ್ನಷ್ಟೇ ಪ್ರತಿಕ್ರಿಯಿಸಬೇಕಿವೆ.