ರಶ್ಯದಲ್ಲಿ 7.4 ತೀವ್ರತೆಯ ಭೂಕಂಪನ; ಸುನಾಮಿ ಎಚ್ಚರಿಕೆ
Update: 2025-09-13 11:53 IST
ಸಾಂದರ್ಭಿಕ ಚಿತ್ರ (PTI)
ಮಾಸ್ಕೊ: ಶನಿವಾರ ರಶ್ಯದ ಪೂರ್ವ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಮೆರಿಕ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ಹೇಳಿದ್ದು, ಕಾಮ್ಚತ್ಕಾ ಪೆನಿನ್ಸುಲಾ ಪ್ರಾಂತ್ಯದಲ್ಲಿ ಸುನಾಮಿ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 2.40 ಗಂಟೆಗೆ ಕಾಮ್ಚತ್ಕಾ ಪೆನಿನ್ಸುಲಾ ಪ್ರಾಂತ್ಯದಲ್ಲಿ ಈ ಭೂಕಂಪನ ಸಂಭವಿಸಿದ್ದು, ಸುಮಾರು 25 ಮೈಲಿ ಆಳದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಭೂಕಂಪನದ ಕೇಂದ್ರವು ಬಂದರು ನಗರಿಯಾದ ಪೆಟ್ರೊಪಾವ್ಲೋವಸ್ಕ್-ಕಾಮ್ಚಾತ್ ಸ್ಕಿಯ ಪೂರ್ವದಿಂದ 70 ಮೈಲಿ ದೂರದಲ್ಲಿದ್ದು, ಇಲ್ಲಿ ಸುಮಾರು 1,65,000 ಜನಸಂಖ್ಯೆ ಇದೆ. ಈ ಭೂಕಂಪನದಿಂದ ಭಯಭೀತರಾದ ಜನರು ತಮ್ಮ ಮನೆಗಳು, ಕಚೇರಿಗಳು ಹಾಗೂ ಶಾಪಿಂಗ್ ಕೇಂದ್ರಗಳಿಂದ ಹೊರಗೋಡಿ ಬಂದರು ಎಂದು ರಶ್ಯದ ಅಧಿಕೃತ ಸುದ್ದಿ ಸಂಸ್ಥೆಗಳ ಪೈಕಿ ಒಂದಾದ RIA Novosti ವರದಿ ಮಾಡಿದೆ.