ಲಂಡನ್ | ಭಾರತ ವಿರೋಧಿ ಘೋಷಣೆಗಳೊಂದಿಗೆ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ
ಮಹಾತ್ಮ ಗಾಂಧಿ ಪ್ರತಿಮೆ | Photo Credit : X \ @nabilajamal_
ಲಂಡನ್: ಲಂಡನ್ ನ ತವಿಸ್ಟಾಕ್ ಚೌಕದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸೋಮವಾರ ಧ್ವಂಸಗೊಳಿಸಲಾಗಿದ್ದು, ಪ್ರತಿಮೆಯ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ.
ಈ ಘಟನೆಯನ್ನು ಲಂಡನ್ ನಲ್ಲಿನ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದ್ದು, ಈ ಕೃತ್ಯ ನಾಚಿಕೆಗೇಡು ಹಾಗೂ ಅಹಿಂಸೆಯ ಪರಂಪರೆಗೆ ಎಸಗಿರುವ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಧ್ಯಾನದ ಭಂಗಿಯಲ್ಲಿ ಕುಳಿತಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಕಂಚಿನ ಪ್ರತಿಮೆಯನ್ನು ಭಾರತ ವಿರೋಧಿ ಘೋಷಣೆಗಳೊಂದಿಗೆ ವಿರೂಪಗೊಳಿಸಲಾಗಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಲಂಡನ್ ನಲ್ಲಿನ ಭಾರತೀಯ ಹೈಕಮಿಷನ್, “ಈ ವಿಷಯವನ್ನು ಸ್ಥಳೀಯ ಪ್ರಾಧಿಕಾರಗಳಿಗೆ ವರದಿ ಮಾಡಲಾಗಿದ್ದು, ಪ್ರತಿಮೆಯನ್ನು ಮರುಸ್ಥಾಪಿಸುವ ಪ್ರಯತ್ನಗಳೊಂದಿಗೆ ಸ್ಥಳದಲ್ಲಿರುವ ಅಧಿಕಾರಿಗಳು ಕೈಜೋಡಿಸಿದ್ದಾರೆ” ಎಂದು ಹೇಳಿದೆ.
ಲಂಡನ್ ನ ಟವಿಸ್ಟಾಕ್ ಚೌಕದ ಬಳಿಯ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ಧ್ವಂಸಗೊಳಿಸಿರುವ ನಾಚಿಕೆಗೇಡು ಕೃತ್ಯದ ವಿರುದ್ಧ ತೀವ್ರ ಖೇದ ಮತ್ತು ಖಂಡನೆ ವ್ಯಕ್ತಪಡಿಸಿರುವ ಲಂಡನ್ ನಲ್ಲಿನ ಭಾರತೀಯ ಹೈಕಮಿಷನ್. “ಇದು ಕೇವಲ ಧ್ವಂಸವಲ್ಲ; ಅಹಿಂಸೆಯ ಪರಿಕಲ್ಪನೆ ಮತ್ತು ಮಹಾತ್ಮ ಗಾಂಧಿಯ ಪರಂಪರೆಯ ಮೇಲೆ ನಡೆದಿರುವ ದಾಳಿಯಾಗಿದೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ನಾವು ಸ್ಥಳೀಯ ಪ್ರಾಧಿಕಾರಗಳ ಬಳಿ ಬಲವಾಗಿ ಒತ್ತಾಯಿಸಿದ್ದು, ನಮ್ಮ ತಂಡ ಈಗಾಗಲೇ ಸ್ಥಳದಲ್ಲಿದೆ. ಮಹಾತ್ಮ ಗಾಂಧಿ ಪ್ರತಿಮೆಯನ್ನು ಮೂಲ ಘನತೆಯೊಂದಿಗೆ ಮರು ಸ್ಥಾಪಿಸಲು ಯತ್ನಿಸುತ್ತಿರುವ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಿದೆ” ಎಂದು ಭಾರತೀಯ ಹೈಕಮಿಷನ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.