ಇಟಲಿಯಲ್ಲಿ ಭುಗಿಲೆದ್ದ ಫೆಲೆಸ್ತೀನ್ ಪರ ಭಾರಿ ಪ್ರತಿಭಟನೆ : ಕನಿಷ್ಠ 60 ಪೊಲೀಸರಿಗೆ ಗಾಯ
ಫೆಲೆಸ್ತೀನ್‌ಗೆ ರಾಷ್ಟ್ರದ ಮನ್ನಣೆ ನೀಡಲು ನಿರಾಕರಿಸಿದ ಪ್ರಧಾನಿ ಮೆಲೋನಿ ವಿರುದ್ಧ ಬೀದಿಗಿಳಿದ ಜನ
Photo: Reuters
ರೋಮ್: ಇಟಲಿಯ ಪ್ರಮುಖ ನಗರಗಳಲ್ಲಿ ಸೋಮವಾರ ಫೆಲೆಸ್ತೀನ್ ಪರ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಗಳಲ್ಲಿ 60ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.
ಮಿಲನ್, ವೆನಿಸ್, ಬೊಲೊಗ್ನಾ, ನೇಪಲ್ಸ್, ರೋಮ್ ಹಾಗೂ ಜಿನೋವಾ ಸೇರಿದಂತೆ ಹಲವೆಡೆ ಸಾವಿರಾರು ಮಂದಿ ಬೀದಿಗಿಳಿದು, ಗಾಝಾದ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿ ಮತ್ತು ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಬಲಪಂಥೀಯ ಸರಕಾರವು ಫೆಲೆಸ್ತೀನ್ ಅನ್ನು ಅಧಿಕೃತವಾಗಿ ಒಂದು ರಾಷ್ಟ್ರವಾಗಿ ಗುರುತಿಸದಿರುವ ನಿರ್ಧಾರವನ್ನು ಖಂಡಿಸಿದರು.
ಟ್ರೇಡ್ ಯೂನಿಯನ್ ಗಳ ಕರೆ ಮೇರೆಗೆ ನಡೆದ “ಎಲ್ಲವನ್ನೂ ನಿರ್ಬಂಧಿಸೋಣ” ಎಂಬ ರಾಷ್ಟ್ರವ್ಯಾಪಿ ಮುಷ್ಕರದ ಅಂಗವಾಗಿ ಈ ಮೆರವಣಿಗೆಗಳು ನಡೆದವು. ಮಿಲನ್ ನ ಕೇಂದ್ರ ರೈಲು ನಿಲ್ದಾಣದಲ್ಲಿ ಕಪ್ಪು ಬಟ್ಟೆ ತೊಟ್ಟ ಪ್ರತಿಭಟನಾಕಾರರು ಕಿಟಕಿಗಳನ್ನು ಒಡೆದು, ಪೊಲೀಸರ ಮೇಲೆ ಕುರ್ಚಿಗಳನ್ನು ಎಸೆದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಘಟನೆಯಲ್ಲಿ ಹಲವರನ್ನು ಬಂಧಿಸಲಾಗಿದೆ.
ವೆನಿಸ್‌ನಲ್ಲಿ ಜಲ ಫಿರಂಗಿ ಬಳಸಿ ಪೊಲೀಸರು ಜನರನ್ನು ಚದುರಿಸಿದರು. ಜಿನೋವಾ, ಲಿವೊರ್ನೊ ಹಾಗೂ ಟ್ರೈಸ್ಟೆ ಬಂದರುಗಳಲ್ಲಿ ಕಾರ್ಮಿಕರು ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ, ಗಾಝಾದ ಯುದ್ಧಕ್ಕಾಗಿ ಇಟಲಿಯಿಂದ ಶಸ್ತ್ರಾಸ್ತ್ರ ಸಾಗಾಟವನ್ನು ತಡೆಯಲು ಒತ್ತಾಯಿಸಿದರು. ಬೊಲೊಗ್ನಾದಲ್ಲಿ ಹೆದ್ದಾರಿ ತಡೆದು ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು.
ರೋಮ್‌ನಲ್ಲಿ ಸಾವಿರಾರು ಮಂದಿ ರೈಲು ನಿಲ್ದಾಣದ ಹೊರಗೆ ಜಮಾಯಿಸಿ ನಂತರ ಪ್ರಮುಖ ರಿಂಗ್ ರಸ್ತೆಯನ್ನು ತಡೆದು ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು “ಫ್ರೀ ಫೆಲೆಸ್ತೀನ್” ಹಾಗೂ “ಎಲ್ಲವನ್ನೂ ನಿರ್ಬಂಧಿಸೋಣ” ಎಂಬ ಘೋಷಣೆಗಳನ್ನು ಕೂಗಿದರು. ನೇಪಲ್ಸ್ ನಲ್ಲಿ ಜನಸಮೂಹ ಒಮ್ಮೆಲೇ ಮುಖ್ಯ ರೈಲು ನಿಲ್ದಾಣ ಪ್ರವೇಶಿಸಿದ ಪರಿಣಾಮ ರೈಲು ಸಂಚಾರ ತಾತ್ಕಾಲಿಕವಾಗಿ ಅಸ್ತವ್ಯಸ್ತವಾಯಿತು.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಜಾರ್ಜಿಯಾ ಮೆಲೋನಿ, ಹಿಂಸಾಚಾರವನ್ನು “ನಾಚಿಕೆಗೇಡಿನ ಸಂಗತಿ” ಎಂದರು. ಇಟಲಿ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ ಗೆ ರಾಷ್ಟ್ರಕ್ಕೆ ಬೆಂಬಲ ನೀಡಿತ್ತು. ಆದರೆ ಮೆಲೋನಿ ಸರಕಾರ ಅದನ್ನು ಪ್ರಸ್ತುತ ಅಧಿಕೃತವಾಗಿ ಗುರುತಿಸದಿರಲು ನಿರ್ಧರಿಸಿರುವುದರಿಂದ ಪ್ರತಿಭಟನೆಯು ಭುಗಿಲೆದ್ದಿತು ಎಂದು ತಿಳಿದು ಬಂದಿದೆ.