×
Ad

“ಫೆಲೆಸ್ತೀನಿನ ಪತ್ರಕರ್ತರ ಹತ್ಯೆಯ ಬಗ್ಗೆ ಮೌನವಾಗಿರುವ ಪಾಶ್ಚಾತ್ಯ ಮಾಧ್ಯಮಗಳಿಗೆ ನಾಚಿಕೆಯಾಗಬೇಕು”: ಲಂಡನ್‌ನಲ್ಲಿ ‘ಟುಗೆದರ್ ಫಾರ್ ಫೆಲೆಸ್ತೀನ್’ ಸಂಗೀತ ಕಾರ್ಯಕ್ರಮದಲ್ಲಿ ಪತ್ರಕರ್ತ ಮೆಹದಿ ಆಕ್ರೋಶ

Update: 2025-09-19 00:00 IST

ಮೆಹದಿ ಹಸನ್ (Photo credit: zeteo.com)

ಲಂಡನ್: ಲಂಡನ್‌ನ ವೆಂಬ್ಲಿ ಅರೆನಾದಲ್ಲಿ ನಡೆದ ‘ಟುಗೆದರ್ ಫಾರ್ ಫೆಲೆಸ್ತೀನ್’ ನಿಧಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ ಹಾಗೂ ಝೆಟೆಯೊ ಸಂಸ್ಥಾಪಕ ಮೆಹದಿ ಹಸನ್ ಅವರ ಮನಮಿಡಿಯುವ ಭಾಷಣ ಪ್ರೇಕ್ಷಕರನ್ನು ನಿಶ್ಶಬ್ದಗೊಳಿಸಿತು. ಸುಮಾರು 13,000 ಜನರ ಸಮೂಹದ ಮುಂದೆ ಮಾತನಾಡಿದ ಅವರು, ಫೆಲೆಸ್ತೀನಿನ ಪತ್ರಕರ್ತರ ವಿರುದ್ಧ ನಡೆಯುತ್ತಿರುವ ಹತ್ಯಾಕಾಂಡ ಹಾಗೂ ಪಾಶ್ಚಾತ್ಯ ಮಾಧ್ಯಮಗಳ ನಿರ್ಲಕ್ಷ್ಯವನ್ನು ಕಟುವಾಗಿ ಟೀಕಿಸಿದರು.

ಈ ಕಾರ್ಯಕ್ರಮದಲ್ಲಿ ಹಾಲಿವುಡ್ ನಟರಾದ ಬೆನೆಡಿಕ್ಟ್ ಕಂಬರ್‌ ಬ್ಯಾಚ್, ರಿಜ್ ಅಹ್ಮದ್, ಗೈ ಪಿಯರ್ಸ್ ಮೊದಲಾದವರು ಪಾಲ್ಗೊಂಡಿದ್ದರು. ಜೊತೆಗೆ ಅಂತರರಾಷ್ಟ್ರೀಯ ಖ್ಯಾತಿಯ ಗಾಯಕರಾದ ಎಲಿಯಾನಾ, ಬಾಸ್ಟಿಲ್ ಹಾಗೂ ಸೇಂಟ್ ಲೆವಂಟ್ ವೇದಿಕೆ ಹಂಚಿಕೊಂಡರು. ಸಾವಿರಾರು ಜನರ ಚಪ್ಪಾಳೆ ಹಾಗೂ ಘೋಷಣೆಗಳ ನಡುವೆ, ಮೆಹದಿ ವೇದಿಕೆಗೆ ಬಂದು ಮಾತನಾಡಿದ ಕ್ಷಣವೇ ಸಭಾಂಗಣದಲ್ಲಿ ಗಂಭೀರ ಮೌನ ಆವರಿಸಿತು.

“ನಮಗೆ ಸುಳ್ಳು ಹೇಳಲಾಗಿದೆ, ದಾರಿ ತಪ್ಪಿಸಲಾಗಿದೆ. ಫೆಲೆಸ್ತೀನಿನ ಪತ್ರಕರ್ತರ ಸಾವಿನ ಬಗ್ಗೆ ಮೌನವಾಗಿರುವ ಪಾಶ್ಚಾತ್ಯ ಮಾಧ್ಯಮಗಳಿಗೆ ನಾಚಿಕೆಯಾಗಬೇಕು. ತಮ್ಮದೇ ಸಹೋದ್ಯೋಗಿಗಳ ಸಾಮೂಹಿಕ ಹತ್ಯೆಯ ಕುರಿತಾಗಿ ಒಂದು ಮಾತನ್ನೂ ಆಡದ ಮಾಧ್ಯಮ ಸಂಸ್ಥೆಗಳು ಪತ್ರಿಕೋದ್ಯಮದ ನೈತಿಕತೆಯನ್ನೇ ಮರೆತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ಟೋಬರ್ 7, 2023 ರಿಂದ ಇಸ್ರೇಲ್ ಗಾಝಾದಲ್ಲಿ 270 ಕ್ಕೂ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಿದೆ. ಕೇವಲ 25 ಮೈಲು ಉದ್ದ ಮತ್ತು 6 ಮೈಲು ಅಗಲದ ಈ ಪ್ರದೇಶವು ಈಗ ವಿಶ್ವದ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ.

“ಒಬ್ಬ ಪಾಶ್ಚಾತ್ಯ ಪತ್ರಕರ್ತನಾಗಿ ನಾನು ಹೇಳಬಲ್ಲೆ ಅವರು ಕೇವಲ ಯುದ್ಧ ಅಥವಾ ನರಮೇಧವನ್ನು ಮಾತ್ರ ವರದಿ ಮಾಡುವುದಿಲ್ಲ. ತಮ್ಮದೇ ನಾಶ, ತಮ್ಮದೇ ಹಸಿವು, ತಮ್ಮದೇ ಮರಣವನ್ನು ನೈಜ ಸಮಯದಲ್ಲಿ ದಾಖಲಿಸುತ್ತಿದ್ದಾರೆ,” ಎಂದು ಮೆಹದಿ ಭಾವನಾತ್ಮಕವಾಗಿ ಹೇಳಿದರು.

ಗಾಝಾದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಗಳು ಈಗ ಎರಡನೇ ವರ್ಷಕ್ಕೆ ಮುಂದುವರಿಯುತ್ತಿವೆ. ತಜ್ಞರ ಅಂದಾಜಿನ ಪ್ರಕಾರ, ಆಕ್ರಮಿತ ಪ್ರದೇಶದ ಮೇಲೆ ಈಗಾಗಲೇ ಆರು ಪರಮಾಣು ಬಾಂಬ್‌ಗಳ ಶಕ್ತಿಗೆ ಸಮಾನವಾದ ದಾಳಿ ನಡೆದಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News