ಉಕ್ರೇನ್ ಯುದ್ಧದಲ್ಲಿ ಸಾವಿರಕ್ಕೂ ಹೆಚ್ಚು ಉತ್ತರ ಕೊರಿಯ ಸೈನಿಕರು ಮೃತ್ಯು
ಸಾಂದರ್ಭಿಕ ಚಿತ್ರ | PC : NDTV
ವಾಶಿಂಗ್ಟನ್ : ರಶ್ಯದ ಕರ್ಸ್ಕ್ ಪ್ರಾಂತದಲ್ಲಿ ಉಕ್ರೇನ್ ಸೈನ್ಯದ ವಿರುದ್ಧ ಹೋರಾಡಲು ನಿಯೋಜಿತರಾಗಿರುವ ಉತ್ತರ ಕೊರಿಯದ ಪಡೆಗಳು ಭಾರೀ ಸಾವು ನೋವನ್ನು ಅನುಭವಿಸುತ್ತಿವೆಯೆಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಶುಕ್ರವಾರ ತಿಳಿಸಿದ್ದಾರೆ.
ಕಳೆದ ಒಂದು ವಾರದಲ್ಲಿ 1 ಸಾವಿರಕ್ಕೂ ಅಧಿಕ ಮಂದಿ ಉತ್ತರ ಕೊರಿಯದ ಸೈನಿಕರು ಸಾವನ್ನಪ್ಪಿದ್ದಾರೆ ಇಲ್ಲವೇ ಗಾಯಗೊಂಡಿದ್ದಾರೆಂದು ಅವರು ಬಹಿರಂಗಪಡಿಸಿದ್ದಾರೆ. ತಮ್ಮ ಸೈನಿಕರು ಬಳಸಿಕೊಳ್ಳುವುದಕ್ಕೆಂದೇ ಇರುವವರೆಂದು ಉತ್ತರ ಕೊರಿಯದ ಸೇನಾ ಜನರಲ್‌ಗಳು ಭಾವಿಸುತ್ತಿದ್ದಾರೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಈವರೆಗೆ ಉಕ್ರೇನ್‌ನಲ್ಲಿ 3 ಸಾವಿರಕ್ಕೂ ಅಧಿಕ ಯೋಧರು ಸಾವನ್ನಪ್ಪಿರುವುದಾಗಿ ಅಥವಾ ಗಾಯಗೊಂಡಿದ್ದಾರೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಉಕ್ರೇನ್ ಯುದ್ಧದಲ್ಲಿ ರಶ್ಯದ ಪರವಾಗಿ ಹೋರಾಡಲು ಹರಿದುಬಂದಿರುವ ಉತ್ತರ ಕೊರಿಯ ಸೈನಿಕರು ಸಾವಿನೆಡೆಗೆ ಕಳುಹಿಸಲ್ಪಡುತ್ತಿದ್ದಾರೆಂದು ಅವರು ಹೇಳಿದರು. ಉತ್ತರ ಕೊರಿಯದ ಸೈನಿಕರ ಮಹಾಪೂರವೇ ಕರ್ಸ್ಕ್‌ನಲ್ಲಿರುವ ಉಕ್ರೇನ್ ಸೈನಿಕರ ನೆಲೆಗಳ ಮೇಲೆ ದಾಳಿ ನಡೆಸುತ್ತಿವೆ. ಆದರೆ ಈ ತಂತ್ರಗಾರಿಕೆಯು ಪರಿಣಾಮಕಾರಿಯಾಗಿ ಪರಿಣಮಿಸಿಲ್ಲವೆಂದು ವಕ್ತಾರ ಕಿರ್ಬಿ ತಿಳಿಸಿದ್ದಾರೆ.
ಉಕ್ರೇನ್ ಪಡೆಗಳಿಗೆ ಶರಣಾಗುವ ಬದಲು ಉತ್ತರಕೊರಿಯದ ಯೋಧರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಒಂದು ವೇಳೆ ತಾವು ಉಕ್ರೇನ್ ಪಡೆಗಳಿಂದ ಸೆರೆಹಿಡಿಯಲ್ಪಟ್ಟಲ್ಲಿ ತಾಯ್ನಾಡಿನಲ್ಲಿರುವ ತಮ್ಮ ಕುಟುಂಬಗಳ ವಿರುದ್ಧ ಸರಕಾರ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳಬಹುದೆಂಬ ಭೀತಿಯಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಉತ್ತರ ಕೊರಿಯ ಸೈನಿಕರು ತೀವ್ರವಾಗಿ ಬೋಧನೆಗೊಳಗಾದವರಾಗಿದ್ದು, ತಮ್ಮ ದಾಳಿಗಳು ನಿಷ್ಪಲವೆಂದು ಗೊತ್ತಿದ್ದರೂ ಆಕ್ರಮಣಕ್ಕೆ ಮುನ್ನುಗುತ್ತಿದ್ದಾರೆಂದು ಕಿರ್ಬಿ ತಿಳಿಸಿದರು.
ಉಕ್ರೇನ್ ಪಡೆಗಳಿಂದ ಬಂಧಿಸಲ್ಪಟ್ಟ ಹಲವಾರು ಉತ್ತರ ಕೊರಿಯದ ಹಲವು ಸೈನಿಕರು ಗಂಭೀರ ಗಾಯಗಳಿಂದಾಗಿ ಸಾವನ್ನಪ್ಪಿದ್ದಾರೆಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಉತ್ತರ ಕೊರಿಯ ಸೈನಿಕರನ್ನು ರಶ್ಯವು ಕನಿಷ್ಠ ಸುರಕ್ಷತೆಗಳೊಂದಿಗೆ ಯುದ್ಧರಂಗಕ್ಕೆ ಕಳುಹಿಸುತ್ತಿದೆಯೆಂದು ಝೆಲೆನ್‌ಸ್ಕಿ ಆಪಾದಿಸಿದರು.
ಉತ್ತರಕೊರಿಯ ಸೈನಿಕರು ಅಪಾರವಾದ ಪ್ರಾಣಹಾನಿ, ನಾಶನಷ್ಟವನ್ನು ಅನುಭವಿಸಿದ್ದಾರೆ. ರಶ್ಯದ ಸೇನೆಯಾಗಲಿ ಅಥವಾ ಉತ್ತರ ಕೊರಿಯಾದ ಮೇಲ್ವಿಚಾರಣಾಧಿಕಾರಿಗಳಾಗಲಿ ಕೊರಿಯನ್ ಯೋಧರ ಪ್ರಾಣದ ಬಗ್ಗೆ ಆಸಕ್ತಿ ಹೊಂದಿಲ್ಲವೆಂದು ಅವರು ಹೇಳಿದ್ದಾರೆ.