×
Ad

ಭೀಕರ ಭೂಕಂಪಕ್ಕೆ ಮೊರಾಕ್ಕೊ ತತ್ತರ: 2000ಕ್ಕೂ ಅಧಿಕ ಮಂದಿ ಮೃತ್ಯು

Update: 2023-09-10 09:43 IST

Photo: NDTV 

ವಾಷಿಂಗ್ಟನ್: ಮೊರಾಕ್ಕೊ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ಭೂಕಂಪದಲ್ಲಿ 2000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಪ್ರಕಟಿಸಿದ್ದಾರೆ. ಆಸ್ತಿಪಾಸ್ತಿಗೆ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಭೀಕರ ಭೂಕಂಪದಿಂದ ಭೀತರಾದ ಜನತೆ ಮಧ್ಯರಾತ್ರಿಯ ವೇಳೆ ಚೀರಾಡುತ್ತಾ ಬೀದಿಗೆ ಬಂದರು.

ಶುಕ್ರವಾರ ರಾತ್ರಿ 11.11ರ ಸುಮಾರಿಗೆ 6.8 ತೀವ್ರತೆಯ ಭೂಕಂಪ ಪ್ರವಾಸಿತಾಣ ಮರಕೇಶ್‍ನ 72 ಕಿಲೋಮೀಟರ್ ದೂರದ ಪರ್ವತಶ್ರೇಣಿಯಲ್ಲಿ ಸಂಭವಿಸಿದೆ ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೆ ವರದಿ ಮಾಡಿದೆ. ಈ ದುರಂತದಲ್ಲಿ ಕನಿಷ್ಠ 2012 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 2059 ಮಂದಿ ಗಾಯಗೊಂಡಿದ್ದು, ಈ ಪೈಕಿ 1404 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸರ್ಕಾರ ಪ್ರಕಟಿಸಿದೆ.

ಕರಾವಳಿ ನಗರಗಳಾದ ರೊಬಾಟ್, ಕಾಸಾಬ್ಲಾಂಕಾ ಮತ್ತು ಎಸ್ಸೋರಿಯಾದಲ್ಲಿ ಕೂಡಾ ತೀವ್ರ ಭೂಕಂಪನದ ಅನುಭವವಾಗಿದೆ.

"ನಾನು ಬಹುತೇಕ ನಿದ್ದೆಗೆ ಜಾರಿದ್ದೆ. ಕಿಟಕಿ ಬಾಗಿಲುಗಳು ಜೋರಾಗಿ ಬಡಿದುಕೊಂಡವು" ಎಂದು ಮರಕೇಶ್‍ಗೆ ಭೇಟಿ ನೀಡಿದ್ದ 80ರ ವೃದ್ಧೆ ಘನ್ನೋವು ನಜೇಮ್ ಅನುಭವ ಹಂಚಿಕೊಂಡರು. "ಭೀತಿಯಿಂದ ನಾನು ಹೊರಗೆ ಓಡಿದೆ. ಒಬ್ಬಂಟಿಯಾಗಿ ನಾನು ಸಾಯುತ್ತಿದ್ದೇನೆ ಎಂಬ ಭಾವನೆ ಬಂತು" ಎಂದು ಹೇಳಿದರು.

ಇದು 120 ವರ್ಷಗಳ ಇತಿಹಾಸದಲ್ಲೇ ಉತ್ತರ ಆಫ್ರಿಕಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News