×
Ad

ವೆನೆಝುವೆಲಾ ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವೆಡೆ ಸ್ಫೋಟ: ಯುದ್ಧ ವಿಮಾನಗಳ ಹಾರಾಟ

ಯುದ್ಧ ಸಾರಿದ ಅಮೆರಿಕ?

Update: 2026-01-03 13:38 IST

Photo credit: PTI

ಕ್ಯಾರಕಾಸ್: ವೆನೆಝುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಶನಿವಾರ ಮುಂಜಾನೆ ಹಲವೆಡೆ ಸ್ಫೋಟಗಳು ಸಂಭವಿಸಿದ್ದು, ನಗರದ ಮೇಲೆ ಕಡಿಮೆ ಎತ್ತರದಲ್ಲಿ ವಿಮಾನಗಳು ಹಾರಿದವು ಎಂದು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಪ್ರಮುಖ ಮಿಲಿಟರಿ ನೆಲೆಯ ಬಳಿಯ ದಕ್ಷಿಣ ವಲಯದಲ್ಲಿ ವಿದ್ಯುತ್ ಕಡಿತ ಉಂಟಾಗಿದ್ದು, ನಗರದ ಕೆಲ ಭಾಗಗಳಲ್ಲಿ ಹೊಗೆ ಏಳುವ ದೃಶ್ಯ ಕಂಡುಬಂತು ಎಂದು ರಾಯಿಟರ್ಸ್ ವರದಿ ಮಾಡಿದೆ.

ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ, ಕನಿಷ್ಠ ಏಳು ಸ್ಫೋಟಗಳ ಶಬ್ದ ಕೇಳಿಬಂದಿದೆ. ಸ್ಫೋಟಗಳ ಬಳಿಕ ಹಲವು ನೆರೆಹೊರೆಯ ನಿವಾಸಿಗಳು ಭಯಭೀತರಾಗಿ ಮನೆಗಳಿಂದ ಹೊರಬಂದು ಬೀದಿಗಳಿಗೆ ಧಾವಿಸಿದರು. ಸ್ಫೋಟ ಸಂಭವಿಸಿದ ಕ್ಷಣದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.

ಸ್ಪ್ಯಾನಿಷ್ ರಾಷ್ಟ್ರೀಯ ಸುದ್ದಿ ಸಂಸ್ಥೆ ಇಎಫ್‌ಇ ಪ್ರಕಾರ, ಕ್ಯಾರಕಾಸ್‌ನ ಪಶ್ಚಿಮ ಭಾಗದಲ್ಲಿರುವ ಪ್ರಮುಖ ಮಿಲಿಟರಿ ಪ್ರದೇಶ ಫೋರ್ಟ್ ಟಿಯುನಾ ಹಾಗೂ ಲಾ ಕಾರ್ಲೋಟಾ ಮಿಲಿಟರಿ ನೆಲೆಯ ಸುತ್ತಮುತ್ತ ವಿಮಾನಗಳ ಹಾರಾಟ ಮತ್ತು ಸ್ಫೋಟಗಳು ವರದಿಯಾಗಿವೆ.

ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನಗಳ ನಡುವೆಯೇ ಈ ಬೆಳವಣಿಗೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ, ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸುವುದು, ಪ್ರದೇಶದಲ್ಲಿ ಮಿಲಿಟರಿ ಹೆಚ್ಚಿಸುವುದು ಹಾಗೂ ಕೆರಿಬಿಯನ್ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪ ಹೊಂದಿರುವ ಹಡಗುಗಳನ್ನು ಗುರಿಯಾಗಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಪದೇಪದೇ ಎಚ್ಚರಿಕೆ ನೀಡಿದ್ದರು.

ಈ ಘಟನೆಗಳ ಕುರಿತು ಅಮೆರಿಕದ ರಕ್ಷಣಾ ಇಲಾಖೆ ಅಥವಾ ವೆನೆಝುವೆಲಾ ಸರ್ಕಾರದಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೆ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳಿಗೆ ವೆನೆಝುವೆಲಾದಲ್ಲಿ ನಡೆದ ಬಾಂಬ್ ದಾಳಿಗಳ ಬಗ್ಗೆ ಮಾಹಿತಿ ಇತ್ತು ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅಧ್ಯಕ್ಷ ಟ್ರಂಪ್ ಅವರು ವೆನೆಝುವೆಲಾದೊಳಗೆ ಕಾರ್ಯನಿರ್ವಹಿಸಲು ಸಿಐಎಗೆ ಅಧಿಕಾರ ನೀಡಿರುವುದಾಗಿ ಬಹಿರಂಗಪಡಿಸಿದ್ದರು. ದೇಶದ ಅಕ್ರಮ ಮಾದಕವಸ್ತು ವ್ಯಾಪಾರ ಹಾಗೂ ವಲಸಿಗರ ಬರುವಿಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News