ವಿಶ್ವದ ಅತಿಹೆಚ್ಚು ವೇತನ ಪಡೆಯುವ ಗೌರವಕ್ಕೆ ಪಾತ್ರರಾದ ಮಸ್ಕ್: ಪ್ಯಾಕೇಜ್ ವಿವರ ಇಲ್ಲಿದೆ...
ಎಲಾನ್ ಮಸ್ಕ್ PC: x.com/WSJ
ನ್ಯೂಯಾರ್ಕ್: ವಿಶ್ವದ ಅತಿಹೆಚ್ಚು ವೇತನ ಪಡೆಯುವ ಗೌರವಕ್ಕೆ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಪಾತ್ರರಾಗಿದ್ದಾರೆ. ಗುರುವಾರ ನಡೆದ ಷೇರುದಾರರ ಸಭೆಯಲ್ಲಿ ಮಸ್ಕ್ ಅವರಿಗೆ ಒಂದು ಲಕ್ಷ ಕೋಟಿ ಡಾಲರ್ (1 ಟ್ರಿಲಿಯನ್) ವೇತನ ಪ್ಯಾಕೇಜ್ ನೀಡುವ ನಿರ್ಣಯ ಆಂಗೀಕರಿಸಲಾಗಿದೆ. ಆದರೆ ನಿಗದಿತ ಧೀರ್ಘಾವಧಿ ಗುರಿಯನ್ನು ತಲುಪಬೇಕು ಎಂಬ ಷರತ್ತಿನ ಮೇಲೆ ಈ ಪ್ಯಾಕೇಜ್ ಅಂಗೀಕರಿಸಲಾಗಿದೆ.
ಗುರುವಾರ ನಡೆದ ಸಭೆಯಲ್ಲಿ ಶೇಕಡ 75ಕ್ಕಿಂತ ಹೆಚ್ಚು ಷೇರುದಾರರು ಈ ಪ್ರಸ್ತಾವವನ್ನು ಅನುಮೋದಿಸಿದರು ಹಾಗೂ ಪ್ರಚಂಡ ಹರ್ಷೋದ್ಗಾರಗಳ ನಡವೆ ಈ ಘೋಷಣೆ ಮಾಡಲಾಯಿತು.
ಟೆಸ್ಲಾ ಭವಿಷ್ಯದಲ್ಲಿ ನಾವು ಹೊಸ ಅಧ್ಯಾಯ ತೆರೆಯುವುದು ಮಾತ್ರವಲ್ಲ; ಇಡೀ ಪುಸ್ತಕವನ್ನೇ ತೆರೆಯುತ್ತಿದ್ದೇವೆ" ಎಂದು ಮಸ್ಕ್ ಪ್ರಕಟಿಸಿದರು.
ಕಂಪನಿಗೆ ನಿಗದಿಪಡಿಸಿರುವ ತಾಂತ್ರಿಕ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಈ ವಿಶೇಷ ಪ್ಯಾಕೇಜ್ ರೂಪಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸ್ವಯಂ-ಚಾಲನೆಯ ತಂತ್ರಜ್ಞಾನ ಮತ್ತು ರೋಬೊಟಿಕ್ಸ್ ನಲ್ಲಿ ಪ್ರತಿಸ್ಪರ್ಧಿಗಳಿಗಿಂತ ಮುಂದಿರಲಿದೆ ಎಂದು ಮಸ್ಕ್ ಹೇಳಿದರು. ಎಲ್ಲ ಯೋಜಿತ ಗುರಿಗಳನ್ನು ತಲುಪಿದರೆ ವಿಶ್ವದ ಮೊಟ್ಟಮೊದಲ ಟ್ರಿಲಿಯನೇರ್ ಎಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ.
ಮಸ್ಕ್ ಅವರ ಸಂಪತ್ತಿನ ಮೌಲ್ಯ 500 ಶತಕೋಟಿ ಡಾಲರ್ ಆಗಿದ್ದು, ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ರ‍್ಯಾಂಕಿಂಗ್ ನಲ್ಲಿ ಅವರು ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅನುಮೋದಿತ ಯೋಜನೆಯಡಿ ಪೂರ್ಣ ಪ್ಯಾಕೇಜ್ ಪಡೆಯಲು ಮಸ್ಕ್ ಟೆಸ್ಲಾದ ಮಾರುಕಟ್ಟೆ ಮೌಲ್ಯಕ್ಕೆ ಸಂಬಂಧಿಸಿದಂತೆ ಹಲವು ಮೈಲುಗಲ್ಲುಗಳನ್ನು ತಲುಪಬೇಕಾಗುತ್ತದೆ. ಟೆಸ್ಲಾ ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಡಾಲರ್ ತಲುಪುವುದು ಮೊದಲ ಗುರಿಯಾಗಿರುತ್ತದೆ.
ಕಾರ್ಯಾಚರಣೆ ಲಾಭ ಮತ್ತು ಉತ್ಪನ್ನ ಬಿಡುಗಡೆಗೆ ಸಂಬಂಧಿಸಿದ ಗುರಿಯ ಜತೆಯೂ ಈ ಪ್ಯಾಕೇಜ್ ಸಂಬಂಧ ಹೊಂದಿರುತ್ತದೆ. ಒಟ್ಟು 20 ದಶಲಕ್ಷ ಟೆಸ್ಲಾ ವಾಹನಗಳನ್ನು ವಿತರಿಸುವುದು ಹಾಗೂ ಟೆಸ್ಲಾದಲ್ಲಿ ಮಸ್ಕ್ ಕನಿಷ್ಠ ಏಳೂವರೆ ವರ್ಷ ಕಾರ್ಯನಿರ್ವಹಿಸುವುದನ್ನೂ ಈ ಯೋಜನೆ ಒಳಗೊಂಡಿದೆ.