ಗಾಝಾದ ಮಾನವೀಯ ಬಿಕ್ಕಟ್ಟು ‘‘ಅತ್ಯಂತ ಕಳವಳಕಾರಿ’’: ‘ಬ್ರಿಕ್ಸ್’ ಸಮ್ಮೇಳನದಲ್ಲಿ ನರೇಂದ್ರ ಮೋದಿ ಹೇಳಿಕೆ
ನರೇಂದ್ರ ಮೋದಿ | PC : PTI
ರಿಯೋ ಡಿ ಜನೈರೊ (ಬ್ರೆಝಿಲ್): ಗಾಝಾದಲ್ಲಿ ಪ್ರಸಕ್ತ ನೆಲೆಸಿರುವ ಮಾನವೀಯ ಬಿಕ್ಕಟ್ಟು ‘’ಅತ್ಯಂತ ಕಳವಳಕಾರಿಯಾಗಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ.
‘ಶಾಂತಿ ಮತ್ತು ಭದ್ರತೆ’ ಎಂಬ ವಿಷಯದ ಕುರಿತ ‘ಬ್ರಿಕ್ಸ್’ ದೇಶಗಳ ಒಕ್ಕೂಟದ ಅಧಿವೇಶನದಲ್ಲಿ ಮಾತನಾಡಿದ ಅವರು, ‘‘ಶಾಂತಿ ಮಾನವ ಜನಾಂಗದ ಕಲ್ಯಾಣಕ್ಕಾಗಿ ಉಳಿದಿರುವ ಏಕೈಕ ಆಯ್ಕೆಯಾಗಿದೆ’’ ಎಂದು ಹೇಳಿದರು. ಬ್ರೆಝಿಲ್ ನ ರಿಯೋ ಡಿ ಜನೈರೊ ನಗರದಲ್ಲಿ ‘ಬ್ರಿಕ್ಸ್’ ದೇಶಗಳ ಒಕ್ಕೂಟದ ಸಮ್ಮೇಳನ ನಡೆಯುತ್ತಿದೆ.
‘ಬ್ರಿಕ್ಸ್’ ಒಕ್ಕೂಟದಲ್ಲಿ ಬ್ರೆಝಿಲ್, ರಶ್ಯ, ಭಾರತ, ಚೀನಾ, ದಕ್ಷಿಣ ಆಫ್ರಿಕ, ಇಂಡೋನೇಶ್ಯ, ಇರಾನ್, ಈಜಿಪ್ಟ್, ಯುಎಇ ಮತ್ತು ಇತಿಯೋಪಿಯ ದೇಶಗಳಿವೆ.
‘‘ಜಾಗತಿಕ ಶಾಂತಿ ಮತ್ತು ಭದ್ರತೆ ಎನ್ನುವುದು ಒಂದು ಆದರ್ಶ ಮಾತ್ರವಲ್ಲ, ಅದು ನಮ್ಮ ಸಮಾನ ಹಿತಾಸಕ್ತಿಗಳು ಮತ್ತು ಭವಿಷ್ಯದ ಸೋಪಾನವಾಗಿದೆ. ಶಾಂತಿಯುತ ಮತ್ತು ಸುಭದ್ರ ಪರಿಸರದಲ್ಲಿ ಮಾತ್ರ ಮಾನವತೆಯ ಪ್ರಗತಿ ಸಾಧ್ಯ. ಪಶ್ಚಿಮ ಏಶ್ಯದಿಂದ ಯುರೋಪ್ ವರೆಗೆ, ಇಂದು ಜಗತ್ತನ್ನು ವಿವಾದಗಳು ಮತ್ತು ಉದ್ವಿಗ್ನತೆಗಳು ಆಕ್ರಮಿಸಿಕೊಂಡಿವೆ. ಗಾಝಾದ ಮಾನವೀಯ ಬಿಕ್ಕಟ್ಟು ಪರಿಸ್ಥಿತಿಯು ಭಾರೀ ಕಳವಳಕ್ಕೆ ಕಾರಣವಾಗಿದೆ’’ ಎಂದು ತನ್ನ ಭಾಷಣದಲ್ಲಿ ಮೋದಿ ಹೇಳಿದ್ದಾರೆ.
‘‘ಸನ್ನಿವೇಶಗಳು ಎಷ್ಟೇ ಕಠಿಣವಾಗಿದ್ದರೂ, ಶಾಂತಿಯ ಮಾರ್ಗವೊಂದೇ ಮಾನವತೆಯ ಕಲ್ಯಾಣಕ್ಕಿರುವ ಏಕೈಕ ಆಯ್ಕೆ ಎನ್ನುವುದನ್ನು ಭಾರತ ದೃಢವಾಗಿ ನಂಬಿದೆ. ಭಾರತವು ಬುದ್ಧ ಮತ್ತು ಮಹಾತ್ಮಾ ಗಾಂಧಿಯ ನಾಡಾಗಿದೆ. ನಮ್ಮಲ್ಲಿ ಯುದ್ಧ ಮತ್ತು ಹಿಂಸೆಗೆ ಅವಕಾಶವಿಲ್ಲ’’ ಎಂದು ಪ್ರಧಾನಿ ಮೋದಿ ನುಡಿದರು.
ಗಾಝಾ ಪಟ್ಟಿಯಲ್ಲಿ ಹಮಾಸ್‌ನೊಂದಿಗೆ ಸುಮಾರು 20 ತಿಂಗಳ ಸಂಘರ್ಷ ನಡೆಸಿದ ಬಳಿಕ, 60 ದಿನಗಳ ಯುದ್ಧ ವಿರಾಮದ ‘ಅಗತ್ಯ ಶರತ್ತುಗಳಿಗೆ’ ಇಸ್ರೇಲ್ ಒಪ್ಪಿಕೊಂಡಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಹೇಳಿದ್ದಾರೆ.
ಹಮಾಸ್ ಜೊತೆಗಿನ ಯುದ್ಧವಿರಾಮ ಒಪ್ಪಂದದ ಬಗ್ಗೆ ಚರ್ಚಿಸಲು ಖತರ್‌ನಲ್ಲಿ ನಡೆಯುತ್ತಿರುವ ಸಂಧಾನ ಸಭೆಗೆ ಇಸ್ರೇಲ್ ಪ್ರತಿನಿಧಿಗಳು ರವಿವಾರ ಮರಳಿದ್ದಾರೆ.
ಗಾಝಾ ಹ್ಯುಮ್ಯಾನಿಟೇರಿಯನ್ ಫೌಂಡೇಶನ್ (ಜಿಎಚ್‌ಎಫ್) ನಡೆಸುತ್ತಿರುವ ನೆರವು ಶಿಬಿರಗಳ ಮೇಲೆ ಕಳೆದ ತಿಂಗಳು ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಕನಿಷ್ಠ 700 ಫೆಲೆಸ್ತೀನಿಯರು ಸಾವಿಗೀಡಾಗಿದ್ದಾರೆ ಎಂದು ಗಾಝಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು-ದೇಶ ಪರಿಹಾರಕ್ಕೆ ಬೆಂಬಲ ನೀಡಿರುವ ಭಾರತವು, 2023 ಅಕ್ಟೋಬರ್ 7ರಂದು ಇಸ್ರೇಲ್ ನಲ್ಲಿ ಹಮಾಸ್ ನಡೆಸಿದ ದಾಳಿಗಳನ್ನು ಖಂಡಿಸಿದ ಮೊದಲ ದೇಶಗಳ ಪೈಕಿ ಒಂದಾಗಿತ್ತು. ಅದು ಇಸ್ರೇಲ್ ನ ಆತ್ಮರಕ್ಷಣೆಯ ಹಕ್ಕನ್ನು ಸಮರ್ಥಿಸಿತ್ತು. ಬಳಿಕ, ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಹಲವು ಮತದಾನಗಳಿಂದ ಭಾರತ ಹೊರಗುಳಿದಿತ್ತು.
►ಪಹಲ್ಗಾಮ್ ದಾಳಿಯ ಪ್ರಸ್ತಾವ
ನರೇಂದ್ರ ಮೋದಿ ತನ್ನ ಭಾಷಣದ ವೇಳೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನೂ ಪ್ರಸ್ತಾಪಿಸಿದರು. ‘‘ಈ ದಾಳಿಯು ಭಾರತದ ಆತ್ಮ, ಅಸ್ಮಿತೆ ಮತ್ತು ಘನತೆಯ ಮೇಲೆ ನಡೆಸಿದ ನೇರ ದಾಳಿಯಾಗಿದೆ’’ ಎಂದು ಅವರು ಬಣ್ಣಿಸಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಎಪ್ರಿಲ್ 22ರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ.
‘‘ಈ ದುಃಖದ ಗಳಿಗೆಯಲ್ಲಿ ನಮ್ಮೊಂದಿಗೆ ನಿಂತ, ನಮಗೆ ಬೆಂಬಲ ನೀಡಿದ ಮತ್ತು ಸಂತಾಪ ವ್ಯಕ್ತಪಡಿಸಿದ ಮಿತ್ರ ದೇಶಗಳಿಗೆ ನನ್ನ ಹೃದಯ ತುಂಬಿದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಭಯೋತ್ಪಾದನೆಯನ್ನು ಖಂಡಿಸುವುದು ನಮ್ಮ ‘ನೀತಿ’ಯಾಗಬೇಕೇ ಹೊರತು ‘ಅನುಕೂಲಕ್ಕೆ ತಕ್ಕಂತೆ’ ಎಂಬಂತಾಗಬಾರದು’’ ಎಂದು ಪ್ರಧಾನಿ ಹೇಳಿದರು.
► ಇರಾನ್‌ಗೆ ಬ್ರಿಕ್ಸ್ ದೇಶಗಳ ಬೆಂಬಲ
ಇತ್ತೀಚೆಗೆ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿರುವ ವಾಯು ದಾಳಿಗಳನ್ನು ಬ್ರಿಕ್ಸ್ ದೇಶಗಳು ಖಂಡಿಸಿವೆ.
‘‘2025 ಜೂನ್ 13ರಿಂದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮೇಲೆ ನಡೆಸಲಾಗಿರುವ ಸೇನಾ ದಾಳಿಗಳನ್ನು ನಾವು ಖಂಡಿಸುತ್ತೇವೆ’’ ಎಂದು ಸಮ್ಮೇಳನದ ಜಂಟಿ ಹೇಳಿಕೆಯಲ್ಲಿ ನಾಯಕರು ಹೇಳಿದ್ದಾರೆ. ಆದರೆ, ಹೇಳಿಕೆಯಲ್ಲಿ ಅಮೆರಿಕವನ್ನಾಗಲಿ, ಇಸ್ರೇಲನ್ನಾಗಲಿ ಹೆಸರಿಸಿಲ್ಲ.
‘‘ನಾಗರಿಕ ಮೂಲಸೌಕರ್ಯಗಳು ಮತ್ತು ಶಾಂತಿಯುತ ಉದ್ದೇಶದ ಪರಮಾಣು ಸ್ಥಾವರಗಳ ಮೇಲೆ ಉದ್ದೇಶಪೂರ್ವಕವಾಗಿ ನಡೆಸಲಾಗಿರುವ ದಾಳಿಗಳ ಬಗ್ಗೆ ನಾವು ಗಂಭೀರ ಕಳವಳ ವ್ಯಕ್ತಪಡಿಸುತ್ತೇವೆ’’ ಎಂದು ಹೇಳಿಕೆ ತಿಳಿಸಿದೆ.
‘‘ಇರಾನ್ ಮೇಲೆ ನಡೆದ ದಾಳಿಗಳು ‘‘ಅಂತರ್‌ರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ’’ ಎಂದು 11 ರಾಷ್ಟ್ರಗಳ ಒಕ್ಕೂಟ ಬಣ್ಣಿಸಿದೆ.
ಈ ಹೇಳಿಕೆಯು ಇರಾನ್‌ಗೆ ಸಿಕ್ಕ ರಾಜತಾಂತ್ರಿಕ ವಿಜಯವಾಗಿದೆ. ಇಸ್ರೇಲ್ ಮತ್ತು ಅಮೆರಿಕ ದಾಳಿಗಳ ಬಳಿಕ ಇರಾನ್ ಗೆ ಹೆಚ್ಚಿನ ಪ್ರಾದೇಶಿಕ ಅಥವಾ ಜಾಗತಿಕ ಬೆಂಬಲ ಸಿಕ್ಕಿರಲಿಲ್ಲ.