ನೇಪಾಳ: ಎವರೆಸ್ಟ್ ಆರೋಹಿಗಳ ಪರವಾನಗಿ ಶುಲ್ಕ ತೀವ್ರ ಹೆಚ್ಚಳ
Update: 2025-01-22 20:45 IST
ಮೌಂಟ್ ಎವರೆಸ್ಟ್ | PTI
ಕಠ್ಮಂಡು : ನೇಪಾಳವು ಮೌಂಟ್ ಎವರೆಸ್ಟ್ ಅನ್ನು ಏರಲು ಅನುಮತಿ ಶುಲ್ಕವನ್ನು 35%ದಷ್ಟು ಹೆಚ್ಚಿಸಲಿದ್ದು ಸುಮಾರು ಒಂದು ದಶಕದಲ್ಲಿ ಮೊದಲ ಬಾರಿಗೆ ಪರ್ವತಾರೋಹಿಗಳಿಗೆ ವಿಶ್ವದ ಅತೀ ಎತ್ತರದ ಶಿಖರವು ದುಬಾರಿಯಾಗಲಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಮೌಂಟ್ ಎವರೆಸ್ಟ್ ಸೇರಿದಂತೆ ವಿಶ್ವದ ಅತೀ ಎತ್ತರದ ಎಂಟು ಪರ್ವತಗಳಿರುವ ನೇಪಾಳಕ್ಕೆ ಪರವಾನಗಿ ಶುಲ್ಕ ಮತ್ತು ವಿದೇಶಿ ಆರೋಹಿಗಳ ಇತರ ಖರ್ಚುಗಳಿಂದ ಬರುವ ವರಮಾನವು ಆದಾಯ ಮತ್ತು ಉದ್ಯೋಗದ ಪ್ರಮುಖ ಮೂಲವಾಗಿದೆ.
8,849 ಮೀಟರ್ ಎತ್ತರದ ಎವರೆಸ್ಟ್ ಶಿಖರ ಏರಲು ಪರವಾನಗಿ ಶುಲ್ಕ ಇನ್ನು ಮುಂದೆ 15,000 ಡಾಲರ್ ಆಗಲಿದೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ನಿರ್ದೇಶಕ ನಾರಾಯಣ್ ಪ್ರಸಾದ್ ರೆಗ್ಮಿ ಹೇಳಿದ್ದಾರೆ. ಕಳೆದ ಒಂದು ದಶಕದಿಂದ 11,000 ಡಾಲರ್ ಪರವಾನಗಿ ಶುಲ್ಕವಿತ್ತು. ಎವರೆಸ್ಟ್ ಶಿಖರ ಏರಲು ಪ್ರತೀ ವರ್ಷ ಸುಮಾರು 300 ಪರವಾನಗಿ ನೀಡಲಾಗುತ್ತದೆ.