ನೇಪಾಳ | ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮೃತರ ಸಂಖ್ಯೆ 34ಕ್ಕೆ ಏರಿಕೆ, 1,000ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು
PC: PTI
ಕಠ್ಮಂಡು: ನೇಪಾಳದಲ್ಲಿ ‘ಜನ್ ಝಡ್’ ಚಳುವಳಿ ಮುಂದುವರಿಯುತ್ತಿದ್ದು, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಕೆ.ಪಿ. ಶರ್ಮಾ ಓಲಿ ಸರಕಾರ ಪತನದ ಬಳಿಕ ನೇಪಾಳದ ಮಧ್ಯಂತರ ಸರಕಾರವನ್ನು ಮುನ್ನಡೆಸುವವರ ಆಯ್ಕೆಯ ಬಗ್ಗೆ ಗೊಂದಲ ಮುಂದುವರಿದಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್ ಡಿಸ್ಕಾರ್ಡ್ ಮೂಲಕ ನಡೆದ ಆನ್‌ಲೈನ್ ಮತದಾನದಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹೆಚ್ಚು ಬೆಂಬಲ ಪಡೆದರೂ, ಪ್ರತಿಭಟನಾಕಾರರ ಇನ್ನೊಂದು ಗುಂಪು ಕುಲ್ ಮಾನ್ ಘಿಸಿಂಗ್ ಅವರ ಹೆಸರನ್ನು ಮುಂದಿರಿಸಿದೆ. ಆರಂಭದಲ್ಲಿ ಮುಂಚೂಣಿಯಲ್ಲಿದ್ದ ಬಾಲೇಂದ್ರ ಶಾ ಅವರನ್ನು ಆಯ್ಕೆಯಿಂದ ಹೊರಗಿಡಲಾಗಿದೆ.
ಪರಿಸ್ಥಿತಿ ಹತೋಟಿಯಲ್ಲಿರಿಸಲು ನೇಪಾಳ ಸೇನೆ ಕಠ್ಮಂಡು ಕಣಿವೆಯ ಮೂರು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ವಿಸ್ತರಿಸಿದೆ. ಸಾರ್ವಜನಿಕ ಸಂಚಾರಕ್ಕೆ ನಿರ್ದಿಷ್ಟ ಸಮಯದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿದೆ. ಹಂತ ಹಂತವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ನೇಪಾಳದಲ್ಲಿ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪುನಃ ತೆರೆಯಲಾಗಿದೆ.
ಈ ನಡುವೆ, ಭಾರತ ಸೇರಿದಂತೆ ನೆರೆ ರಾಷ್ಟ್ರಗಳು ನೇಪಾಳದಲ್ಲಿರುವ ತಮ್ಮ ನಾಗರಿಕರನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯಾಚರಣೆ ಆರಂಭಿಸಿವೆ.