ಫ್ರಾನ್ಸ್ ಸರಕಾರದ ವಿರುದ್ಧ ಅವಿಶ್ವಾಸ ಅಂಗೀಕಾರ | ಮೈಕೆಲ್ ಬರ್ನೆರ್ ಸರಕಾರ ಪದಚ್ಯುತಿ
ಮೈಕೆಲ್ ಬರ್ನೆರ್ | PC : AP/PTI
ಪ್ಯಾರಿಸ್: ಫ್ರಾನ್ಸ್ ನಲ್ಲಿ ಪ್ರಧಾನಿ ಮೈಕೆಲ್ ಬರ್ನೆರ್ ನೇತೃತ್ವದ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿದ್ದು 3 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿದ್ದ ಸರಕಾರ ಪದಚ್ಯುತಗೊಂಡಿದೆ.
1962ರ ಬಳಿಕ ಫ್ರಾನ್ಸ್ ನಲ್ಲಿ ಹಾಲಿ ಸರಕಾರದ ವಿರುದ್ಧ ರಾಷ್ಟ್ರೀಯ ಅಸೆಂಬ್ಲಿ ಅವಿಶ್ವಾಸ ನಿರ್ಣಯ ಅಂಗೀಕರಿಸಿರುವ ಮತ್ತು ಈ ಹಿನ್ನೆಲೆಯಲ್ಲಿ ಸರಕಾರ ಪತನವಾಗುತ್ತಿರುವ ಮೊದಲ ನಿದರ್ಶನ ಇದಾಗಿದೆ. ಪ್ರಧಾನಿ ಬರ್ನೆರ್ ಸದನದಲ್ಲಿ ಚರ್ಚೆ ನಡೆಸದೆ ಮತ್ತು ಮತಕ್ಕೆ ಹಾಕದೆ, ವಿಶೇಷಾಧಿಕಾರ ಬಳಸಿ ಬಜೆಟ್‍ಗೆ ಅನುಮೋದನೆ ಪಡೆದಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು.
ಬಲಪಂಥೀಯ ಮತ್ತು ಎಡಪಂಥೀಯ ಸದಸ್ಯರು ಒಟ್ಟಾಗಿ ಅವಿಶ್ವಾಸ ನಿರ್ಣಯದ ಪರ ಧ್ವನಿ ಎತ್ತಿದರು. ನಿರ್ಣಯ ಅಂಗೀಕಾರಕ್ಕೆ 288 ಮತಗಳ ಅಗತ್ಯವಿದ್ದು 331 ಸದಸ್ಯರು ನಿರ್ಣಯದ ಪರ ಮತ ಚಲಾಯಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ. ಇದೀಗ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಅವರು ಹೊಸ ಪ್ರಧಾನಿಯನ್ನು ಆಯ್ಕೆ ಮಾಡುವವರೆಗೆ ಬಾರ್ನೆರ್ ಉಸ್ತುವಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಸಾಮಾಜಿಕ ಭದ್ರತಾ ಹಣಕಾಸು ಮಸೂದೆಗೆ ಸಂಸತ್ತಿನಲ್ಲಿ ಅಗತ್ಯವಿರುವ ಬೆಂಬಲ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಅಧ್ಯಕ್ಷರ ಆದೇಶ ಬಳಸಿ ಪ್ರಧಾನಿ ಬಾರ್ನೆರ್ ಮಸೂದೆಗೆ ಅಂಗೀಕಾರ ಪಡೆದಿದ್ದರು. ಇದೀಗ ಸರಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿರುವುದರಿಂದ ಬಜೆಟ್ ಅನ್ನು ರದ್ದುಗೊಳಿಸಬೇಕೆಂದು ವಿಪಕ್ಷಗಳು ಆಗ್ರಹಿಸಿವೆ.
ವಿಶ್ವಾಸಮತ ಗಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಅಧ್ಯಕ್ಷ ಮ್ಯಾಕ್ರೋನ್‍ರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲು ನಿರ್ಧರಿಸಿರುವುದಾಗಿ ಸರಕಾರದ ಮೂಲಗಳು ಹೇಳಿವೆ.