ಹಸೀನಾ ಹಸ್ತಾಂತರಕ್ಕೆ ಗಡುವು ಹೇಳಲಾಗದು; ಕಾನೂನು ಪ್ರಕ್ರಿಯೆ ಬಳಿಕ ನಿರ್ಧಾರ: ಭಾರತ
ಶೇಖ್ ಹಸೀನಾ | Photo : PTI
ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ಸರಕಾರ ಸಲ್ಲಿಸಿರುವ ಮನವಿಯನ್ನು ಕಾನೂನುಬದ್ಧ ಪ್ರಕ್ರಿಯೆಯಂತೆ ಪರಿಶೀಲಿಸಲಾಗುತ್ತಿದೆ. ಹೀಗಾಗಿ ಹಸೀನಾ ಅವರ ವಾಪಸಾತಿಗೆ ಯಾವುದೇ ನಿರ್ದಿಷ್ಟ ಗಡುವು ನೀಡಲು ಸಾಧ್ಯವಿಲ್ಲ ಎಂದು ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನರ್ ದಿನೇಶ್ ತ್ರಿವೇದಿ ಶನಿವಾರ ಹೇಳಿದರು.
ಢಾಕಾದ ಖಾಸಗಿ ಚಿಂತಕರ ವೇದಿಕೆಯೊಂದು ಆಯೋಜಿಸಿದ್ದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಹಸೀನಾ ಅವರ ವಾಪಸಾತಿಯ ಬಗ್ಗೆ ಯಾರೂ ನಿರ್ದಿಷ್ಟ ಸಮಯದ ಮಿತಿ ನೀಡಲು ಸಾಧ್ಯವಿಲ್ಲ’ ಎಂದರು.
2024ರ ಆಗಸ್ಟ್ ನಲ್ಲಿ ಸರಕಾರದ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರಕಾರ ಪತನಗೊಂಡ ಬಳಿಕ 79 ವರ್ಷದ ಹಸೀನಾ ಢಾಕಾದಿಂದ ಪಲಾಯನ ಮಾಡಿ ಭಾರತದಲ್ಲಿ ವಾಸಿಸುತ್ತಿದ್ದಾರೆ.
ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರಕಾರ ಸಲ್ಲಿಸಿರುವ ಮನವಿಯನ್ನು ನಿಗದಿತ ಕಾರ್ಯವಿಧಾನಕ್ಕೆ ಅನುಗುಣವಾಗಿ ಪರಿಶೀಲಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಈ ಹಿಂದೆ ಸ್ಪಷ್ಟಪಡಿಸಿತ್ತು.
‘ಈ ಕುರಿತು ಭಾರತ ಸರಕಾರ ಪದೇಪದೇ ಉತ್ತರಿಸಿದೆ. ಇದಕ್ಕೊಂದು ಪ್ರಕ್ರಿಯೆ ಇದೆ. ಆ ಪ್ರಕ್ರಿಯೆಯು ಕಾನೂನುಬದ್ಧ ಮತ್ತು ಸುಸಂಘಟಿತವಾಗಿದೆ’ ಎಂದು ತ್ರಿವೇದಿ ಹೇಳಿದರು.
ಹಸೀನಾ ಅವರನ್ನು ಭಾರತೀಯ ವಾಯುಪಡೆ ಅಥವಾ ಸೇನೆ ಭಾರತಕ್ಕೆ ಕರೆತಂದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಬಾಂಗ್ಲಾದೇಶದ ವಿಮಾನದಲ್ಲೇ ಭಾರತಕ್ಕೆ
ಹಸೀನಾ ಅವರ ಸರಕಾರವನ್ನು ಉರುಳಿಸಿದ ‘ಜುಲೈ ದಂಗೆ’ ಸಂದರ್ಭದಲ್ಲಿ ಆಗಸ್ಟ್ 5ರಂದು ಬಾಂಗ್ಲಾದೇಶ ವಾಯುಪಡೆಯ ವಿಮಾನವೊಂದು ಅವರನ್ನು ಭಾರತಕ್ಕೆ ಕರೆತಂದಿತ್ತು.
ಆರಂಭದಲ್ಲಿ ಸರ್ಕಾರಿ ಉದ್ಯೋಗಗಳ ಮೀಸಲಾತಿ ವ್ಯವಸ್ಥೆ ವಿರುದ್ಧ ಆರಂಭಗೊಂಡಿದ್ದ ಪ್ರತಿಭಟನೆ ಬಳಿಕ ವ್ಯಾಪಕ ಸರಕಾರ ವಿರೋಧಿ ಚಳವಳಿಯಾಗಿ ಮಾರ್ಪಟ್ಟಿತ್ತು. ಪ್ರತಿಭಟನಾಕಾರರು ಹಸೀನಾ ಅವರ ಅಧಿಕೃತ ನಿವಾಸದತ್ತ ಮುನ್ನುಗ್ಗುತ್ತಿದ್ದಾಗ, ಬಾಂಗ್ಲಾದೇಶದ ಸೇನೆಯ ನೇತೃತ್ವದ ಭದ್ರತಾ ಪಡೆ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆದೊಯ್ದಿತ್ತು.
‘ಆ ನಿರ್ದಿಷ್ಟ ಸಮಯದಲ್ಲಿ ಅವರು ಇನ್ನೂ ಬಾಂಗ್ಲಾದೇಶದ ಪ್ರಧಾನಿಯಾಗಿದ್ದರು. ಆ ಸಂದರ್ಭದಲ್ಲಿ ನಮಗೆ ಬೇರೆ ಆಯ್ಕೆಗಳಿರಲಿಲ್ಲ. ನೆರೆಯ ರಾಷ್ಟ್ರವಾಗಿ ವಾಸ್ತವಿಕತೆಯನ್ನು ಒಪ್ಪಿಕೊಳ್ಳುವುದು ನಮ್ಮ ಕರ್ತವ್ಯವಾಗಿತ್ತು. ಕೆಲವೊಮ್ಮೆ ಅನಿರೀಕ್ಷಿತ ಸನ್ನಿವೇಶಗಳು ಎದುರಾದಾಗ ಅದಕ್ಕೆ ನಾವು ಸಿದ್ಧರಾಗಿರುವುದಿಲ್ಲ’ ಎಂದು ತ್ರಿವೇದಿ ಹೇಳಿದರು.
‘ನಾವು ಅವರನ್ನು ಸ್ವೀಕರಿಸುವುದಿಲ್ಲ, ಭಾರತಕ್ಕೆ ಇಳಿಯಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ’ ಎಂದರು.
ಬಾಂಗ್ಲಾದೇಶದಲ್ಲಿನ ‘ದುರಂತಮಯ ಸನ್ನಿವೇಶಗಳಿಂದ’ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶಗಳು ಜಗತ್ತಿನ ಯಾವುದೇ ಭಾಗದಲ್ಲೂ ಮರುಕಳಿಸಬಾರದು ಎಂದು ಅವರು ಹೇಳಿದರು.
ರೆಹಮಾನ್ ಗೈರು
ಶನಿವಾರ ನಡೆದ ‘ಬೇ ಆಫ್ ಬೆಂಗಾಲ್ ಕನ್ವರ್ಸೇಷನ್ 2026’ರ ಐದನೇ ಆವೃತ್ತಿಯ ಆರಂಭಿಕ ಭಾಷಣ ಮಾಡಿದ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್, ಇದೇ ಕಾರ್ಯಕ್ರಮದ ಪ್ಯಾನಲ್ ಚರ್ಚೆಯಲ್ಲಿ ತ್ರಿವೇದಿ ಹೇಳಿಕೆ ನೀಡುವ ವೇಳೆ ಉಪಸ್ಥಿತರಿರಲಿಲ್ಲ.
ಹಸೀನಾ ಅವರ ಹಸ್ತಾಂತರದ ಕುರಿತು ತ್ರಿವೇದಿ ನೀಡಿದ ಮೊದಲ ಸ್ಪಷ್ಟ ಹೇಳಿಕೆ ಇದಾಗಿದೆ. ಈ ಹಿಂದೆ ಅವರು ‘ರಾಜಕೀಯ’ ವಿಷಯಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ಹಿರಿಯ ಬಿಜೆಪಿ ನಾಯಕ ದಿನೇಶ್ ತ್ರಿವೇದಿ ಅವರನ್ನು ಢಾಕಾದ ಭಾರತದ ಹೈಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಈ ಹುದ್ದೆಗೆ ರಾಜಕೀಯ ಹಿನ್ನೆಲೆಯ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿರುವುದು ಇದೇ ಮೊದಲು. ಇದುವರೆಗೆ ಈ ಹುದ್ದೆಯನ್ನು ವೃತ್ತಿಪರ ರಾಜತಾಂತ್ರಿಕರು ನಿರ್ವಹಿಸುತ್ತಿದ್ದರು.
ಯೂನುಸ್ ಬಳಿಕ ರೆಹಮಾನ್ ಸರಕಾರ
ಹಸೀನಾ ಅವರ ಸರಕಾರ ಪತನಗೊಂಡ ಬಳಿಕ 2024ರ ಆಗಸ್ಟ್ 8ರಂದು ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಆಡಳಿತ ಅಧಿಕಾರಕ್ಕೆ ಬಂದಿತ್ತು. ಸುಮಾರು ಒಂದೂವರೆ ವರ್ಷ ಈ ಆಡಳಿತ ಬಾಂಗ್ಲಾದೇಶವನ್ನು ಮುನ್ನಡೆಸಿತ್ತು.
ಹಸೀನಾ ಅವರ ಹಸ್ತಾಂತರದ ಬೇಡಿಕೆ, ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಕುರಿತ ಕಳವಳ ಮತ್ತು ಚೀನಾದೊಂದಿಗೆ ಢಾಕಾ ಹೊಂದಿರುವ ಆಳವಾದ ಬಾಂಧವ್ಯದಿಂದ ಉಂಟಾದ ಉದ್ವಿಗ್ನತೆ ಸೇರಿದಂತೆ ಹಲವು ಕಾರಣಗಳಿಂದ ಯೂನಸ್ ನೇತೃತ್ವದ ಮಧ್ಯಂತರ ಆಡಳಿತದ ಅವಧಿಯಲ್ಲಿ ಭಾರತ–ಬಾಂಗ್ಲಾದೇಶ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು.
2025ರಲ್ಲಿ ವಿಶೇಷ ನ್ಯಾಯಮಂಡಳಿಯೊಂದು ಹಸೀನಾ ಅವರ ಅನುಪಸ್ಥಿತಿಯಲ್ಲಿಯೇ ವಿಚಾರಣೆ ನಡೆಸಿ ಅವರಿಗೆ ಮರಣದಂಡನೆ ವಿಧಿಸಿತ್ತು.
ಮಧ್ಯಂತರ ಸರಕಾರವು ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ವಿಸರ್ಜಿಸಿ, ರಾಜತಾಂತ್ರಿಕ ಟಿಪ್ಪಣಿಯ ಮೂಲಕ ಅವರನ್ನು ಹಸ್ತಾಂತರಿಸುವಂತೆ ಭಾರತವನ್ನು ಕೋರಿತ್ತು.
ಫೆಬ್ರವರಿ 12ರಂದು ನಡೆದ ಚುನಾವಣೆಯ ಬಳಿಕ ತಾರಿಕ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಸರಕಾರ ಅಧಿಕಾರಕ್ಕೆ ಬಂದಿತು. ಹಸೀನಾ ಅವರ ಪಕ್ಷದ ಮೇಲಿನ ನಿಷೇಧವನ್ನು ಈ ಸರಕಾರವೂ ಮುಂದುವರಿಸಿದ್ದು, ಅವರನ್ನು ಹಸ್ತಾಂತರಿಸುವಂತೆ ಪದೇಪದೇ ಒತ್ತಾಯಿಸುತ್ತಿದೆ. ಈ ಚುನಾವಣೆಯಲ್ಲಿ ಅವಾಮಿ ಲೀಗ್ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿತ್ತು.
ಹಸೀನಾ ಅವರ ಹಸ್ತಾಂತರದ ವಿಷಯವು ಭಾರತ–ಬಾಂಗ್ಲಾದೇಶ ಸಂಬಂಧಗಳ ಮೇಲೆ ನಿರಂತರ ಒತ್ತಡ ಉಂಟುಮಾಡುತ್ತಿದೆ. ಇದು ರೆಹಮಾನ್ ಅವರ ಹೊಸದಿಲ್ಲಿ ಭೇಟಿಯ ಮೇಲೂ ಪರಿಣಾಮ ಬೀರಿದೆ.
ಕಳೆದ ತಿಂಗಳು ನಡೆದ BRICS ಶೃಂಗಸಭೆಯಲ್ಲಿ ಭಾಗವಹಿಸಲು ಭಾರತ ರೆಹಮಾನ್ ಅವರಿಗೆ ಆಹ್ವಾನ ನೀಡಿತ್ತು. ಇದಲ್ಲದೆ, ಫೆಬ್ರವರಿಯಿಂದಲೇ ಅವರಿಗಾಗಿ ಪ್ರತ್ಯೇಕ ದ್ವಿಪಕ್ಷೀಯ ಭೇಟಿಯ ಆಹ್ವಾನವೂ ಚಾಲ್ತಿಯಲ್ಲಿತ್ತು.
ಅಧಿಕಾರ ವಹಿಸಿಕೊಂಡ ಬಳಿಕ ರೆಹಮಾನ್ ಅವರು ಶೃಂಗಸಭೆಯಲ್ಲಿ ಭಾಗವಹಿಸಿಲ್ಲ ಅಥವಾ ಭಾರತಕ್ಕೆ ಭೇಟಿ ನೀಡಿಲ್ಲ.
ಆದರೂ, ರೆಹಮಾನ್ ಅವರ ಪ್ರಸ್ತಾಪಿತ ಭಾರತ ಭೇಟಿಗೆ ಸಂಬಂಧಿಸಿದ ಮಾತುಕತೆಗಳಲ್ಲಿ ಪ್ರಗತಿಯ ಬಗ್ಗೆ ಬಾಂಗ್ಲಾದೇಶ ‘ಸಕಾರಾತ್ಮಕ’ ನಿಲುವು ಹೊಂದಿದೆ. ಆದರೆ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಹಸೀನಾ ವರ್ಚುವಲ್ ಪತ್ರಿಕಾಗೋಷ್ಠಿ
ಆಗಸ್ಟ್ 5ರಂದು ಹೊಸದಿಲ್ಲಿಯಲ್ಲಿ ಹಸೀನಾ ನಡೆಸಿದ ವರ್ಚುವಲ್ ಪತ್ರಿಕಾಗೋಷ್ಠಿಯು ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಜೈಲು ಶಿಕ್ಷೆ ಅಥವಾ ಮರಣದಂಡನೆಯ ಬೆದರಿಕೆಗೆ ತಾವು ಹೆದರುವುದಿಲ್ಲ ಎಂದು ಹೇಳಿದ್ದ ಹಸೀನಾ, ದೇಶವನ್ನು ‘ಸರಿಯಾದ ಹಾದಿ’ಗೆ ತರಲು ಡಿಸೆಂಬರ್ ನಲ್ಲಿ ತಾಯ್ನಾಡಿಗೆ ಮರಳಲು ದೃಢನಿರ್ಧಾರ ಮಾಡಿರುವುದಾಗಿ ಘೋಷಿಸಿದ್ದರು.
ಭಾರತಕ್ಕೆ ಪಲಾಯನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಅವರು ನಡೆಸಿದ ಮೊದಲ ಸಾರ್ವಜನಿಕ ಸಂವಾದ ಇದಾಗಿತ್ತು. ಇದು ಕೇವಲ ಆಡಿಯೋ ಒಳಗೊಂಡ ವರ್ಚುವಲ್ ಪತ್ರಿಕಾಗೋಷ್ಠಿಯಾಗಿತ್ತು.
‘ಅವರು ನನ್ನನ್ನು ಜೈಲಿಗೆ ಹಾಕಬಹುದು ಅಥವಾ ಕೊಲ್ಲಬಹುದು ಎಂಬುದು ನನಗೆ ತಿಳಿದಿದೆ. ನನ್ನ ಜನರೊಂದಿಗೆ ಇರಲು ನಾನು ಮನೆಗೆ ಮರಳುತ್ತೇನೆ’ ಎಂದು ಹಸೀನಾ ಹೇಳಿದ್ದರು.
ಈ ವರ್ಚುವಲ್ ಪತ್ರಿಕಾಗೋಷ್ಠಿಯಿಂದಾಗಿ ರೆಹಮಾನ್ ಅವರ ಪ್ರಸ್ತಾಪಿತ ಭಾರತ ಭೇಟಿಯ ಪ್ರಕ್ರಿಯೆ ‘ಹದಗೆಟ್ಟಿದೆ’ ಎಂದು ಬಳಿಕ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಹೇಳಿತ್ತು.
ಮತ್ತೊಂದೆಡೆ, ಆ ಮಾಧ್ಯಮ ಕಾರ್ಯಕ್ರಮದಲ್ಲಿ ಭಾರತಕ್ಕೆ ಯಾವುದೇ ಪಾತ್ರವಿಲ್ಲ ಮತ್ತು ಬಾಂಗ್ಲಾದೇಶ ಸರಕಾರದ ಕುರಿತು ಅಲ್ಲಿ ಹೇಳಲಾದ ಯಾವುದೇ ವಿಷಯವನ್ನು ಭಾರತ ಅನುಮೋದಿಸುವುದಿಲ್ಲ ಎಂದು ಭಾರತವ ಸ್ಪಷ್ಟಪಡಿಸಿತ್ತು.
‘ಶರಣಾಗಲು ಅವಕಾಶವಿಲ್ಲ’
ಈ ಮಧ್ಯೆ, ಹಸೀನಾ ಅವರಿಗೆ ಶರಣಾಗಲು ಯಾವುದೇ ಅವಕಾಶವಿಲ್ಲ ಎಂದು ಬಾಂಗ್ಲಾದೇಶದ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಹೇಳಿದ್ದಾರೆ. ಹಸೀನಾ ಬಾಂಗ್ಲಾದೇಶಕ್ಕೆ ಮರಳಿದ ತಕ್ಷಣ ಅವರನ್ನು ಬಂಧಿಸಲಾಗುವುದು ಮತ್ತು ಅವರ ವಿರುದ್ಧದ ನ್ಯಾಯಾಲಯದ ತೀರ್ಪನ್ನು ಕಾನೂನಿನ ಪ್ರಕಾರ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.