×
Ad

ನೊಬೆಲ್ ಪ್ರಶಸ್ತಿ ಕಾರ್ಯಕ್ರಮ: ರಶ್ಯ, ಇರಾನ್‌ನ ಆಹ್ವಾನ ರದ್ದು

Update: 2023-09-02 23:34 IST

photo:twitter.com/@NobelPrize

ಸ್ಟಾಕ್‌ಹೋಮ್: ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ ನೊಬೆಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಶ್ಯ, ಇರಾನ್ ಹಾಗೂ ಬೆಲಾರಸ್ ದೇಶಗಳಿಗೆ ನೀಡಿದ್ದ ಆಹ್ವಾನವನ್ನು ಹಿಂಪಡೆಯಲಾಗಿದೆ ಎಂದು ನೋಬೆಲ್ ಪ್ರತಿಷ್ಟಾನ ಶನಿವಾರ ಹೇಳಿಕೆ ನೀಡಿದೆ.

ಈ ಮೂರೂ ದೇಶಗಳನ್ನು ಆಹ್ವಾನಿಸಿರುವುದಕ್ಕೆ ತೀವ್ರ ಆಕ್ಷೇಪ ಮತ್ತು ವಿರೋಧ ವ್ಯಕ್ತವಾಗಿತ್ತು. ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಸ್ವೀಡನ್‌ನ ಹಲವು ಸಂಸದರು ಶುಕ್ರವಾರ ಹೇಳಿದ್ದರು. ಆದರೆ ಈ ಕಾರ್ಯಕ್ರಮವು ನೋಬೆಲ್ ಪ್ರಶಸ್ತಿಯ ಪ್ರಮುಖ ಸಂದೇಶಗಳನ್ನು ಎಲ್ಲರಿಗೂ ತಿಳಿಸುವ ಅವಕಾಶವನ್ನು ನೀಡುತ್ತದೆ ಎಂದು ನೋಬೆಲ್ ಪ್ರತಿಷ್ಟಾನ ಪ್ರತಿಕ್ರಿಯಿಸಿತ್ತು.

ಉಕ್ರೇನ್‌ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧ, ಇರಾನ್‌ನಲ್ಲಿ ಮಾನವ ಹಕ್ಕುಗಳ ದಮನವನ್ನು ಖಂಡಿಸಿ ಆ ದೇಶಗಳ ಪ್ರತಿನಿಧಿಗಳನ್ನು ಆಹ್ವಾನಿಸಬಾರದು ಎಂದು ಸ್ವೀಡನ್‌ನ ಸಂಸದರು ಆಗ್ರಹಿಸಿದ್ದರು. ಬೆಲಾರಸ್‌ನ ಕಾನೂನುಬಾಹಿರ ಆಡಳಿತವನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಆ ದೇಶದ ವಿಪಕ್ಷ ಮುಖಂಡರು ನೊಬೆಲ್ ಪ್ರತಿಷ್ಟಾನವನ್ನು ಆಗ್ರಹಿಸಿದ್ದರು.

`ಸ್ವೀಡನ್‌ನಲ್ಲಿ ವ್ಯಕ್ತವಾಗುತ್ತಿರುವ ಬಲವಾದ ಪ್ರತಿಕ್ರಿಯೆಯನ್ನು ಗಮನಿಸಿ, ರಶ್ಯ, ಬೆಲಾರಸ್ ಮತ್ತು ಇರಾನ್ ರಾಯಭಾರಿಗಳಿಗೆ ಕಳುಹಿಸಿದ್ದ ಆಹ್ವಾನವನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ, ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನಡೆಯುವ ನೋಬೆಲ್ ಶಾಂತಿ ಪುರಸ್ಕಾರ ಕಾರ್ಯಕ್ರಮಕ್ಕೆ ಎಲ್ಲಾ ದೇಶದ ರಾಯಭಾರಿಗಳನ್ನೂ ಆಹ್ವಾನಿಸಲಾಗುತ್ತಿದೆ' ಎಂದು ನೊಬೆಲ್ ಪ್ರತಿಷ್ಟಾನ ಶನಿವಾರ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News