ಚೀನಾ ಭೇಟಿಗೂ ಮುನ್ನ ಹೊಸ ಕ್ಷಿಪಣಿ ಪರಿಶೀಲಿಸಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್
Photo:X/@upuknews1
ಸಿಯೋಲ್: ಚೀನಾದ ಬೀಜಿಂಗ್ ನಲ್ಲಿ ನಡೆಯಲಿರುವ ಸೇನಾ ರ‍್ಯಾಲಿಗೆ ತೆರಳುವುದಕ್ಕೂ ಮುನ್ನ, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ತಮ್ಮ ದೇಶದ ಹೊಸ ಕ್ಷಿಪಣಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ರವಿವಾರ ಪ್ರಮುಖ ಯುದ್ಧ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆಗಳಿಗೆ ಕಿಮ್ ಜಾಂಗ್ ಉನ್ ಭೇಟಿ ನೀಡಿದ್ದರು.
ಈ ವೇಳೆ, “ಕ್ಷಿಪಣಿ ಉತ್ಪಾದನೆ ಮಾಡಲು ಮೂರು ದೀರ್ಘಕಾಲೀನ ಯೋಜನೆಗಳನ್ನು ರೂಪಿಸಲಾಗಿದೆ. ದೇಶದ ಕ್ಷಿಪಣಿ ಉತ್ಪಾದನಾ ಸಾಮರ್ಥ್ಯವು ವೃದ್ಧಿಯಾಗಿದೆ” ಎಂದು ಕಿಮ್ ಹೇಳಿದ್ದಾರೆ.
ಉತ್ತರ ಕೊರಿಯಾ ಸೇನಾ ತುಕಡಿ ಜೊತೆಗೆ ಕ್ಷಿಪಣಿ ಮತ್ತು ಶಸ್ತ್ರಾಸ್ತ್ರಗಳನ್ನು ರಶ್ಯಗೆ ರಫ್ತು ಮಾಡುತ್ತಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಇವುಗಳನ್ನು ಬಳಸಲಾಗುತ್ತಿದೆ ಎಂದು ಉತ್ತರ ಕೊರಿಯಾದ ಪ್ರತಿಸ್ಪರ್ಧಿ ದೇಶವಾದ ದಕ್ಷಿಣ ಕೊರಿಯಾ ಆರೋಪಿಸಿದೆ.
ಈ ನಡುವೆ, ಎರಡನೇ ವಿಶ್ವ ಯುದ್ಧದ ನಂತರದ ಬೀಜಿಂಗ್ ನಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಮಟ್ಟದ ಸೇನಾ ರ‍್ಯಾಲಿ ನಡೆಯಲಿದೆ. ಚೀನಾದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಉನ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಇದು ಕಿಮ್ ಅವರ ಪ್ರಥಮ ಬಹುಪಕ್ಷೀಯ ಅಂತಾರಾಷ್ಟ್ರೀಯ ಸಭೆಯಾಗಿದೆ.