×
Ad

ಆಪರೇಷನ್ ಸಿಂಧೂರ | ಜಾಗತಿಕ ಮುಖಂಡರ ಪ್ರತಿಕ್ರಿಯೆ

Update: 2025-05-07 20:29 IST

PC: x.com/ndtv

ವಿಶ್ವಸಂಸ್ಥೆ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಭಯೋತ್ಪಾದಕರ ತಾಣಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಗೆ ಜಾಗತಿಕ ಮುಖಂಡರು ಪ್ರತಿಕ್ರಿಯಿಸಿದ್ದು ಈ ವಲಯದಲ್ಲಿ ಉದ್ವಿಗ್ನತೆ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗರಿಷ್ಟ ಸಂಯಮ ವಹಿಸುವಂತೆ ಹಾಗೂ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಉದ್ವಿಗ್ನತೆ ಶಮನಗೊಳಿಸುವಂತೆ ಭಾರತ ಮತ್ತು ಪಾಕಿಸ್ತಾನವನ್ನು ಆಗ್ರಹಿಸಿದ್ದಾರೆ.

ಎಲ್‍ಒಸಿ ಮತ್ತು ಅಂತರಾಷ್ಟ್ರೀಯ ಗಡಿಯುದ್ದಕ್ಕೂ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದು ನೆರೆಹೊರೆಯ ಎರಡೂ ಪರಮಾಣು ಶಕ್ತ ದೇಶಗಳು ಗರಿಷ್ಠ ಸಂಯಮ ವಹಿಸುವಂತೆ ಕರೆ ನೀಡಿದ್ದಾರೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥರ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.

ಭಾರತದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ` ಪರಿಸ್ಥಿತಿ ಉದ್ವಿಗ್ನಗೊಂಡಿರುವುದು ನಾಚಿಕೆಗೇಡಿನ ಸಂಗತಿ. ಎರಡೂ ದೇಶಗಳು ದೀರ್ಘಕಾಲದಿಂದ ಸಂಘರ್ಷ ನಡೆಸುತ್ತಿದ್ದಾರೆ. ಇದು ಶೀಘ್ರ ಅಂತ್ಯಗೊಳ್ಳುತ್ತದೆ ಎಂದು ನಿರೀಕ್ಷಿಸುತ್ತೇನೆ' ಎಂದು ಪೋಸ್ಟ್ ಮಾಡಿದ್ದಾರೆ.

ಭಾರತದ ಕಾರ್ಯಾಚರಣೆ `ವಿಷಾದನೀಯ' ಎಂದು ಚೀನಾ ಬಣ್ಣಿಸಿದ್ದು ಈ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳಗೊಂಡಿರುವುದಾಗಿ ಹೇಳಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಎರಡೂ ದೇಶಗಳು ಸಂಯಮ ವಹಿಸಬೇಕೆಂದು ಚೀನಾದ ವಿದೇಶಾಂಗ ಇಲಾಖೆ ಆಗ್ರಹಿಸಿದೆ.

ಭಾರತ- ಪಾಕ್ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿರುವ ಬಗ್ಗೆ ಜಪಾನ್ ಕ್ಯಾಬಿನೆಟ್‍ ನ ಮುಖ್ಯ ಕಾರ್ಯದರ್ಶಿ ಯೊಷಿಮಸ ಹಯಾಷಿ ಕಳವಳ ಸೂಚಿಸಿದ್ದು ಪರಿಸ್ಥಿತಿಯು ಪೂರ್ಣ ಪ್ರಮಾಣದ ಮಿಲಿಟರಿ ಸಂಘರ್ಷದ ರೂಪ ಪಡೆಯುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಉದ್ವಿಗ್ನತೆ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವಂತೆ ಮತ್ತು ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಎಚ್ಚರಿಕೆ ವಹಿಸಬೇಕೆಂದು ಯುಎಇ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಾಯೆದ್ ಅಲ್ ನಹ್ಯಾನ್ ಆಗ್ರಹಿಸಿದ್ದಾರೆ.

ಪರಿಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಡೆಯಲು ಗರಿಷ್ಠ ಸಂಯಮ ವಹಿಸಬೇಕೆಂದು ರಶ್ಯ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಆಗ್ರಹಿಸಿದ್ದಾರೆ. ಆತ್ಮರಕ್ಷಣೆಗಾಗಿ ಭಾರತದ ಹಕ್ಕನ್ನು ಇಸ್ರೇಲ್ ಗೌರವಿಸುತ್ತದೆ. ಭಯೋತ್ಪಾದಕರು ಅಮಾಯಕರ ವಿರುದ್ಧದ ಘೋರ ಅಪರಾಧಗಳ ಹೊಣೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News