ಗಾಝಾ | ನೆರವು ವಿತರಣಾ ಕೇಂದ್ರದಲ್ಲಿ ಇಸ್ರೇಲ್ ಗುಂಡಿನ ದಾಳಿಗೆ 90ಕ್ಕೂ ಅಧಿಕ ಫೆಲೆಸ್ತೀನಿಯರು ಬಲಿ
Photo credit: PTI
ಜೆರೂಸಲೆಮ್/ಗಾಝಾ: ಗಾಝಾದಲ್ಲಿ ರವಿವಾರ ನೆರವು ವಿತರಣಾ ಕೇಂದ್ರಗಳಿಗೆ ಧಾವಿಸುತ್ತಿದ್ದ ನಾಗರಿಕರ ಗುಂಪಿನ ಮೇಲೆ ಇಸ್ರೇಲ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 93 ಮಂದಿ ಸಾವನ್ನಪ್ಪಿದ್ದಾರೆ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ತಿಳಿಸಿದೆ. ಈ ಘಟನೆಯಲ್ಲಿ ಡಜನ್‌ಗಟ್ಟಲೆ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ ಉತ್ತರ ಗಾಝಾ ಕಡೆಗೆ ನೆರವು ಸಾಗಿಸುತ್ತಿದ್ದ ಟ್ರಕ್ ಗಳ ಬಳಿಯಲ್ಲಿ 80 ಮಂದಿ ಸಾವಿಗೀಡಾಗಿದ್ದಾರೆ. ದಕ್ಷಿಣ ರಫಾ ಪ್ರದೇಶದಲ್ಲಿದ್ದ ಮತ್ತೊಂದು ನೆರವು ವಿತರಣಾ ಕೇಂದ್ರದ ಬಳಿ ಒಂಭತ್ತು ಮಂದಿ ಮತ್ತು ಖಾನ್ ಯೂನಿಸ್ ಬಳಿಯ ನೆರವು ವಿತರಣಾ ಕೇಂದ್ರದ ಬಳಿ ನಾಲ್ಕು ಜನರು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಹಸಿದ ಜನರ ಮೇಲೆ ಗುಂಡಿನ ದಾಳಿ"
ಆಹಾರ ಪಡೆಯಲು ಗಾಝಾ ನಗರದಲ್ಲಿ ಧಾವಿಸಿದ್ದ ಸಾವಿರಾರು ಹಸಿದ ನಾಗರಿಕರು, ಯುಎನ್ ವರ್ಲ್ಡ್ ಫುಡ್ ಪ್ರೋಗ್ರಾಂನ 25 ಟ್ರಕ್‌ಗಳ ಬಳಿ ಸೇರುವ ವೇಳೆ ಗುಂಡಿನ ದಾಳಿ ನಡೆದಿದೆ. “ಹಸಿದ ಜನರ ಬೃಹತ್ ಗುಂಪು ಸೇರಿದರು. ಅವರು ಗುಂಡೇಟಿಗೆ ಬಲಿಯಾದರು,” ಎಂದು ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಸ್ರೇಲ್ ಸೇನೆ ಈ ಪ್ರತ್ಯಾಕ್ರಮಣವನ್ನು ಸಮರ್ಥಿಸಿಕೊಂಡಿದ್ದು, “ಸೈನಿಕರು ತಕ್ಷಣದ ಅಪಾಯಕ್ಕೆ ಪ್ರತಿಕ್ರಿಯಿಸಿ ಎಚ್ಚರಿಕೆ ನೀಡಲು ಗುಂಡು ಹಾರಿಸಿದರು” ಎಂದು ಹೇಳಿದೆ. ಆದರೆ ಮಾನವೀಯ ಸಂಘಟನೆಗಳು ಮತ್ತು ಫೆಲೆಸ್ತೀನ್ ಅಧಿಕಾರಿಗಳು ಇದನ್ನು ಖಂಡಿಸಿದ್ದಾರೆ.
“ಆಹಾರ ಪಡೆಯಲು ಹೋಗಿದ್ದೆ, ಆದರೆ ಬದಲಿಗೆ ಗುಂಡೇಟಿಗೆ ಬೆದರಿದ ಜನಸಂದಣಿ ಕಂಡೆ. ಟ್ಯಾಂಕ್ ಗಳು ಶೆಲ್‌ಗಳನ್ನು ಹಾರಿಸುತ್ತಿದ್ದವು, ಸ್ನೈಪರ್‌ಗಳು ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವಂತೆ ಜನರ ಮೇಲೆ ಗುಂಡು ಹಾರಿಸುತ್ತಿದ್ದರು," ಎಂದು ಗಾಝಾ ನಿವಾಸಿ ಖಾಸೆಮ್ ಅಬು ಖಾತೆರ್ ಹೇಳಿದರು.
ಡಬ್ಲ್ಯೂಎಫ್‌ಪಿ ಈ ಹತ್ಯಾಕಾಂಡವನ್ನು ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದೆ. ಗಾಝಾದಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧಗಳು, ಪ್ರವೇಶಿಸಲು ಇರುವ ತೊಡಕುಗಳು ಮತ್ತು ಕಠಿಣ ಭದ್ರತಾ ನಿಯಮಗಳ ಕಾರಣದಿಂದಾಗಿ ಅಂಕಿಅಂಶಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ಸುದ್ದಿ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ
2023 ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್‌ನಲ್ಲಿ ನಡೆಸಿದ ದಾಳಿಯ ನಂತರ ಆರಂಭವಾದ ಯುದ್ಧದಲ್ಲಿ ಇಸ್ರೇಲ್ ನ ಪ್ರತೀಕಾರವಾಗಿ ಈಗಾಗಲೇ ಸುಮಾರು 58,895 ಫೆಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಪೋಪ್ ಲಿಯೋ XIV ಅವರು ಗಾಝಾದ ಹೋಲಿ ಫ್ಯಾಮಿಲಿ ಚರ್ಚ್ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದು, ಯುದ್ಧವನ್ನು ಅನಾಗರಿಕತೆ ಎಂದು ಹೇಳಿದ್ದಾರೆ.