×
Ad

ಪಾಕಿಸ್ತಾನ | ಜೈಲಿನಲ್ಲಿ ಇಮ್ರಾನ್ ಖಾನ್ ಭೇಟಿಗೆ ಅನುಮತಿ ಕೋರಿ ಸಹೋದರಿಯಿಂದ ಅರ್ಜಿ

Update: 2025-11-28 20:32 IST

ಇಮ್ರಾನ್ ಖಾನ್ | Photo Credit : PTI  

ಲಾಹೋರ್, ನ.28: ಅಡಿಯಾಲಾ ಜೈಲಿನಲ್ಲಿ ಬಂಧನದಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ರನ್ನು ಭೇಟಿಯಾಗಲು ಅನುಮತಿ ನಿರಾಕರಿಸುವ ಮೂಲಕ ಜೈಲಿನ ಸೂಪರಿಂಟೆಂಡೆಂಟ್ ಹಾಗೂ ಇತರರು ನ್ಯಾಯಾಂಗ ನಿಂದನೆ ಎಸಗಿದ್ದಾರೆಂದು ಆರೋಪಿಸಿ ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್ ಇಸ್ಲಾಮಾಬಾದ್ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದಾರೆ. ಖೈಬರ್ ಪಖ್ತೂಂಕ್ವಾದ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಸೇರಿದಂತೆ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಹಲವಾರು ನಾಯಕರು ಈ ಸಂದರ್ಭ ಹಾಜರಿದ್ದರು.

ಇಮ್ರಾನ್‌ ರನ್ನು ಭೇಟಿಯಾಗಲು ಅನುಮತಿ ನೀಡುವಂತೆ ಜೈಲಿನ ಸೂಪರಿಂಟೆಂಡೆಟ್, ಬೆರೂಮಿ ಪೊಲೀಸ್ ಠಾಣೆಯ ಅಧಿಕಾರಿ, ಪಾಕಿಸ್ತಾನದ ಆಂತರಿಕ ಇಲಾಖೆಯ ಕಾರ್ಯದರ್ಶಿ ಮತ್ತು ಪಂಜಾಬ್ ಪ್ರಾಂತೀಯ ಸರಕಾರದ ಗೃಹ ಇಲಾಖೆಯ ಕಾರ್ಯದರ್ಶಿಗೆ ಸೂಚಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಹಲವು ವಾರಗಳಿಂದ ಲಿಖಿತ ಕೋರಿಕೆ ಸಲ್ಲಿಸಿದರೂ ಇಮ್ರಾನ್ ಖಾನ್‌ ರನ್ನು ಭೇಟಿಯಾಗಲು ಕುಟುಂಬದವರಿಗೆ ಅವಕಾಶ ನಿರಾಕರಿಸುವ ಮೂಲಕ ಜೈಲು ಅಧಿಕಾರಿಗಳು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ. ಇಮ್ರಾನ್ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಕಳವಳಗೊಂಡಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

ಈ ಮಧ್ಯೆ, ಇಮ್ರಾನ್ ಖಾನ್ ಅವರು ಜೈಲಿನಲ್ಲಿಯೇ ಮೃತಪಟ್ಟಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿರುವ ಪಾಕಿಸ್ತಾನದ ಆಂತರಿಕ ಸಚಿವ ತಲಾಲ್ ಚೌಧರಿ ` ಇಮ್ರಾನ್ ಆರೋಗ್ಯವಾಗಿದ್ದಾರೆ ಮತ್ತು ಯಾವುದೇ ಕೈದಿಗಳಿಗೆ ಲಭ್ಯವಿಲ್ಲದ ವೈಯಕ್ತಿಕ ಬಾಣಸಿಗನಂತಹ ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ' ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News